ಕೊಲೊಂಬೊ, ನ.10- ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸಂಸತ್ ವಿಸರ್ಜಿಸಿದ್ದಾರೆ.
ಇದೇ ವೇಳೆ ದ್ವೀಪರಾಷ್ಟ್ರದಲ್ಲಿ ಸಂಸತ್ ವಿಸರ್ಜನೆ ನಂತರ ಉದ್ಭವಿಸಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಸೂಕ್ಷ್ಮ ನಿಗಾ ವಹಿಸಿರುವುದಾಗಿ ಅಮೆರಿಕ ಹೇಳಿದೆ.
ಕಳೆದ ಎರಡು ವಾರಗಳಿಂದ ಪ್ರಧಾನಿಗಳ ನಡುವಿನ ಬಿಕ್ಕಟ್ಟು ಮುಗಿಯುವ ಲಕ್ಷಣಗಳು ತೋರದ ಹಿನ್ನೆಲೆಯಲ್ಲಿ ಅಧ್ಯಕ್ಷರು ಸಂಸತ್ ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.
ಪ್ರಧಾನಿ ರಾನಿಲ್ ವಿಕ್ರಮ್ ಸಿಂಘೆ ಅವರನ್ನು ಅಮಾನತು ಮಾಡಿ ಮಹಿಂದ ರಾಜಪಕ್ಸೆ ಅವರನ್ನು ನೇಮಿಸಲಾಗಿತ್ತು. ಅಲ್ಲಿಂದ ಸಾಂವಿಧಾನಿಕ ಬಿಕ್ಕಟ್ಟು ಆರಂಭವಾಗಿತ್ತು. ಇನ್ನು ರಾಜಪಕ್ಸೆ ಅವರ ಅಧಿಕಾರ ಅರಳುವ ಮುನ್ನವೇ ಮೊಟಕುಗೊಂಡಿದೆ. ಸಿಕ್ಕ ಅವಕಾಶ ಬಳಸಿಕೊಳ್ಳದ ರಾಜಪಕ್ಸೆ ಅವರು ಅಗತ್ಯ ಬಹುಮತ ಗಳಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಲೋಕಸಭೆ ವಿಸರ್ಜಿಸುವುದು ಲಂಕಾ ಅಧ್ಯಕ್ಷರಿಗೆ ಅನಿವಾರ್ಯವಾಗಿತ್ತು. ಇದರೊಂದಿಗೆ ಲಂಕಾದ 225 ಸದಸ್ಯ ಬಲದ ಲೋಕಸಭೆ ಇವತ್ತು ಮಧ್ಯರಾತ್ರಿಗೆ ಅಂತ್ಯವಾಗಲಿದೆ.
ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಸಂಸತ್ ವಿಸರ್ಜನೆ ಮಾಡಿರುವ ಸಿರಿಸೇನಾ ನವೆಂರ್ಬ 14ರ ನಂತರ ಸಂಸತ್ ಅಧಿವೇಶನ ಆಯೋಜಿಸಲು ಸೂಚನೆ ನೀಡಿದ್ದಾರೆ.