29 ಉತ್ಪನ್ನಗಳ ಆಮದು ಸುಂಕ ಏರಿಸಿದ ಭಾರತ: ಅಮೆರಿಕಕ್ಕೆ ತಿರುಗೇಟು

ನವದೆಹಲಿ: ಭಾರತ ಕೃಷಿ ಉತ್ಪನ್ನಗಳು, ಉಕ್ಕು  ಮತ್ತು ಕಬ್ಬಿಣ ಸೇರಿದಂತೆ ಒಟ್ಟು 29 ಉತ್ಪನ್ನಗಳ ಮೇಲಿನ ಆಮದು ಸುಂಕವನ್ನುಏರಿಕೆ ಮಾಡಿದ್ದು, ಈ ಮೂಲಕ ಇತ್ತೀಚಿಗಷ್ಟೇ  ಉಕ್ಕು ಮತ್ತು ಅಲ್ಯುಮಿನಿಯಂ ಮೇಲಿನ ಆಮದು ಸುಂಕ ಏರಿಸಿದ್ದ ಅಮೆರಿಕಕ್ಕೆ ತಿರುಗೇಟು ನೀಡಿದೆ.
ಆ್ಯಪಲ್‌, ಆಲ್ಮಂಡ್‌, ಚಿಕ್‌ ಪೀಸ್‌, ಲೆಂಟಿಲ್‌, ವಾಲ್‌ ನಟ್‌ ಸೇರಿದಂತೆ 28 ಉತ್ಪನ್ನಗಳ ಆಮದು ಸುಂಕ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಆರ್ಟೆಮಿಯಾ ಆಮದು ಸುಂಕ ಆಗಸ್ಟ್ 4ರಿಂದ ಜಾರಿಗೆ ಬರುವಂತೆ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ, ಚಿಕ್ ಪೀಸ್ ಬೆಂಗಾಲ್ ಗ್ರಾಮ್ ಮತ್ತು ಮಸೂರ್ ದಾಲ್ ಮೇಲಿನ ಆಮದು ಸುಂಕವನ್ನು ಶೇ.30ರಿಂದ ಶೇ.70ಕ್ಕೆ ಏರಿಕೆ ಮಾಡಿದೆ.
ಐರೋಪ್ಯ ಒಕ್ಕೂಟ ಅಮೆರಿಕದ ಹಲವಾರು ಉತ್ಪನ್ನಗಳ ಮೇಲೆ ಆಮದು ಸುಂಕ ಏರಿಸುವ ನಿರ್ಧಾರ ಕೈಗೊಂಡ ಕೆಲವೇ ದಿನಗಳಲ್ಲಿ ಭಾರತ ಈ ನಿರ್ಧಾರವನ್ನು ಪ್ರಕಟಿಸಿದೆ.
ಅಮೆರಿಕದ ಉಕ್ಕು ಮತ್ತು ಅಲ್ಯುಮಿನಿಯಂ ಸುಂಕ ಏರಿಕೆಯಿಂದ ವಿನಾಯಿತಿ ಪಡೆಯುವಲ್ಲಿ ವಿಫ‌ಲವಾದ ಬಳಿಕ ಭಾರತ ವಿಶ್ವ ವಾಣಿಜ್ಯ ಸಂಘಟನೆಯಲ್ಲಿ ತನ್ನ ದೂರನ್ನು ದಾಖಲಿಸಿತ್ತು. ಮಾತ್ರವಲ್ಲದೆ ಭಾರತ ಡಬ್ಲ್ಯುಟಿಓ ಗೆ ಉತ್ಪನ್ನಗಳ ಒಂದು ಪಟ್ಟಿಯನ್ನು ಸಲ್ಲಿಸಿ ಅವುಗಳ ಮೇಲೆ ತಾನು ಹೆಚ್ಚಿನ ಸಂಕ ಭರಿಸಬೇಕಾದೀತು ಎಂದು ಎಚ್ಚರಿಕೆ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ