ಅಮೆರಿಕಾ ವಸ್ತುಗಳ ಮೇಲೆ ಪ್ರತೀಕಾರದ ತೆರಿಗೆ ಹೇರಿಕೆ: ನ.2ಕ್ಕೆ ಮುಂದೂಡಿದ ಭಾರತ

ನವದೆಹಲಿ: ಅಮೆರಿಕಾದಿಂದ ಆಮದು ಮಾಡಿಕೊಳ್ಳುವ ಕೆಲವು ವಸ್ತುಗಳಿಗೆ ಅಧಿಕ ತೆರಿಗೆ ವಿಧಿಸುವ ಪ್ರತೀಕಾರದ ತೆರಿಗೆ ಪ್ರಕ್ರಿಯೆಯನ್ನು ಭಾರತ ವಿಳಂಬ ಮಾಡಿ ಅದನ್ನು ನವೆಂಬರ್ 2ಕ್ಕೆ ಮುಂದೂಡಿದೆ ಎಂದು ಸರ್ಕಾರದ ಆದೇಶ ತಿಳಿಸಿದೆ.ಅಮೆರಿಕಾ ವಿರುದ್ಧ ಪ್ರತೀಕಾರವಾಗಿ ಸ್ಟೀಲ್ ಮತ್ತು ಅಲ್ಯುಮಿನಿಯಂ ವಸ್ತುಗಳ ಮೇಲೆ ಆಮದು ತೆರಿಗೆಯನ್ನು ಹೆಚ್ಚಿಸುವ ಪ್ರಕ್ರಿಯೆಯನ್ನು ಭಾರತ ಎರಡನೇ ಬಾರಿಗೆ ಮುಂದೂಡುತ್ತಿದೆ.ಅಮೆರಿಕಾ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಭಾರತ ಮತ್ತು ಅಮೆರಿಕಾ ಮಧ್ಯೆ ವ್ಯಾಪಾರ ಒಪ್ಪಂದದಲ್ಲಿ ವ್ಯತ್ಯಾಸವುಂಟಾಗಿದೆ. ಕೆಲವು ವಸ್ತುಗಳ ಮೇಲೆ ವ್ಯಾಪಾರದ ಘರ್ಷಣೆಗಳು ಉಂಟಾಗದಂತೆ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿರುವುದರಿಂದ ಇದೀಗ ಭಾರತ ತೆರಿಗೆ ವಿಧಿಸುವ ಪ್ರಕ್ರಿಯೆಯನ್ನು ಮುಂದೂಡಿದೆ.ಹೊಸ ಸ್ಟೀಲ್ ಮತ್ತು ಅಲ್ಯುಮಿನಿಯಂ ದರಗಳಿಂದ ವಿನಾಯ್ತಿ ನೀಡಲು ಅಮೆರಿಕಾ ನಿರಾಕರಿಸಿದ್ದರಿಂದ ಕಳೆದ ಜೂನ್ ನಲ್ಲಿ ಕೇಂದ್ರ ಸರ್ಕಾರ ಆಗಸ್ಟ್ 4ರಿಂದ ಆಮದು ತೆರಿಗೆಯನ್ನು ಅಮೆರಿಕಾದ ಕೆಲವು ವಸ್ತುಗಳ ಮೇಲೆ ಹೆಚ್ಚಿಸಲು ನಿರ್ಧರಿಸಿತ್ತು. ಅವುಗಳಲ್ಲಿ ಬಾದಾಮಿ, ವಾಲ್ನಟ್ ಮತ್ತು ಆಪಲ್ ಗಳು ಕೂಡ ಸೇರಿದ್ದವು. ನಂತರ ಸೆಪ್ಟೆಂಬರ್ 18ರವರೆಗೆ ತೆರಿಗೆ ವಿಧಿಸುವುದನ್ನು ಸರ್ಕಾರ ವಿಳಂಬ ಮಾಡಿತ್ತು. ಇದೀಗ ಮತ್ತೆ ರಾಜಿ ಒಪ್ಪಂದ ಏರ್ಪಟ್ಟಿರುವುದರಿಂದ ಮುಂದೂಡಲಾಗಿದೆ.ಮಿಲಿಟರಿ ವಿನಿಮಯವನ್ನು ಮಾಡಿಕೊಳ್ಳಲು ಈ ತಿಂಗಳ ಆರಂಭದಲ್ಲಿ ನಡೆದ 2+2 ಮಾತುಕತೆ ವೇಳೆ ಭಾರತ-ಅಮೆರಿಕಾ ಒಪ್ಪಂದ ಮಾಡಿಕೊಂಡಿದ್ದವು. ಈ ಮಧ್ಯೆ ಅಮೆರಿಕಾ ನಿನ್ನೆ ಚೀನಾ ಜೊತೆ ಮತ್ತೊಂದು ಸುತ್ತಿನ ವ್ಯಾಪಾರ ಕದನ ಆರಂಭಿಸಿದ್ದು ಚೀನಾದ ಸುಮಾರು 200 ಶತಕೋಟಿ ಮೌಲ್ಯದ ವಸ್ತುಗಳ ಮೇಲೆ ಶೇಕಡಾ 10ರಷ್ಟು ತೆರಿಗೆ ವಿಧಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ