ರಾಸಾಯನಿಕ ದಾಳಿಗೆ ಪ್ರತಿಯಾಗಿ ಸಿರಿಯಾ ಮೇಲೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಮಿಲಿಟರಿ ದಾಳಿ: ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಣೆ

ವಾಷ್ಟಿಂಗ್ಟನ್:ಏ-14: ಸಿರಿಯಾ ಅಧ್ಯಕ್ಷ ಬಶರ್ ಅಸಾದ್ ಮುಗ್ದ ಜನರ ಮೇಲೆ ರಾಸಾಯನಿಕ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಸಿರಿಯಾ ಮೇಲೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಮಿಲಿಟರಿ ದಾಳಿ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಸಿರಿಯಾ ವಿರುದ್ಧ ವಾಗ್ದಾಳಿ ನಡೆಸಿರುವ ಟ್ರಂಪ್, ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳಿಂದ ಜಂಟಿ ಕಾರ್ಯಾಚರಣೆ ನಡೆಸುವುದಾಗಿ ಹೇಳಿದ್ದಾರೆ. ಇದೀಗ ಸಿರಿಯಾದ ಡಮಾಸ್ಕಸ್ ಮೇಲೆ ತ್ರಿರಾಷ್ಟ್ರಗಳು ವೈಮಾನಿಕ ದಾಳಿ ನಡೆಸುತ್ತಿವೆ.

ಸಿರಿಯಾದಲ್ಲಿನ ರಾಸಾಯನಿಕ ದಾಳಿಗೆ ಪ್ರತಿಯಾಗಿ ಯಾವಾಗ ಬೇಕಾದರೂ ದಾಳಿ ನಡೆಸಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಇನ್ನು ಈ ದಾಳಿ ಆದಷ್ಟು ಬೇಗ ಅಥವಾ ಇನ್ನಷ್ಟು ತಡವಾಗಬಹುದು ಎಂದಿದ್ದರು.

ಇನ್ನು ಅಮೆರಿಕ ಸಿರಿಯಾದತ್ತ 12 ಬೃಹತ್ ಯುದ್ಧನೌಕೆಗಳನ್ನು ಕಳುಹಿಸಿದೆ. ಯುಎಸ್ಎಸ್ ಹ್ಯಾರಿ ಎಸ್ ಟ್ರೂಮನ್ ಎಂಬ ಅಣ್ವಸ್ತ್ರ ಸಜ್ಜಿತ ಬೃಹತ್ ಹಡಗನ್ನು ಐದು ಇತರ ಹಡಗುಗಳೊಂದಿಗೆ ಯುರೋಪ್ ಹಾಗೂ ಮಧ್ಯ ಪ್ರಾಚ್ಯದತ್ತ ಕಳುಹಿಸಲು ಅಮೆರಿಕದ ನೌಕಾಪಡೆ ಸರ್ವ ಸಿದ್ಧತೆ ನಡೆಸಿದೆ.

ಇದೇ ವೇಳೆ ರಷ್ಯಾ ಮತ್ತು ಇರಾನ್ ರಾಷ್ಟ್ರಗಳ ಮೈತ್ರಿ ಬಗ್ಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಶಾಂತಿ ಮತ್ತು ಸ್ಥಿರತೆ ಕಾಪಾಡಲು ರಷ್ಯಾ ನಾಗರಿಕ ರಾಷ್ಟ್ರಗಳೊಂದಿಗೆ ಕೈ ಜೋಡಿಸುತ್ತದೆಯೋ ಅಥವಾ ಶತ್ರು ರಾಷ್ಟ್ರಗಳೊಂದಿಗೆ ಕೈ ಜೋಡಿಸುತ್ತದೆಯೋ ಶೀಘ್ರ ತೀರ್ಮಾನಿಸಬೇಕು ಎಂದು ಹೇಳಿದ್ದಾರೆ.

ಕಳೆದ ವಾರ ಡಮಾಸ್ಕಸ್ ನ ಡೌಮಾದಲ್ಲಿ ರಾಸಾಯನಿಕ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಹಲವರು ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಟ್ರಂಪ್ ಸಿರಿಯಾದಲ್ಲಿ ಶಾಂತಿ ಕಾಪಾಡಲು ಯುದ್ಧ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

America, Britain and France have launched a coordinated airstrike in Syria

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ