ಬೆಂಗಳೂರು: ರಾಜ್ಯಾಧ್ಯಂತ ತೀವ್ರ ಕುತೂಹಲವನ್ನು ಇಮ್ಮಡಿಗೊಳಿಸಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಿಗ್ಗೆ 7 ಗಂತೆಯಿಂದಲೇ ಮತದಾನ ಆರಂಭವಾಗಿದ್ದು, ಸಂಜೆ 6ರವರೆಗೆ ಮತದಾನ ನಡೆಯಲಿದೆ.
ಎಲ್ಲ ಕ್ಷೇತ್ರಗಳ ಮತದಾರರು ತಮ್ಮ ಗುರುತಿನ ಚೀಟಿ ಹೀಡಿದು ಮತಗಟ್ಟೆಯ ಬಳಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಮತದಾನ ನಡೆಯುವ ಸ್ಥಳಗಳಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಚುನಾವಣೆಯ ಫಲಿತಾಂಶ ನ.6ರಂದು ಲಭ್ಯವಾಗಲಿದೆ.
ಐದು ಕ್ಷೇತ್ರಗಳಲ್ಲಿ ಒಟ್ಟು 30 ಮಂದಿ ಕಣದಲ್ಲಿದ್ದಾರೆ. ಪ್ರಮುಖವಾಗಿ ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭೆ, ಜಮಖಂಡಿ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ದಿ.ಎಸ್. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ, ಬಳ್ಳಾರಿಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ, ಶಾಸಕ ಶ್ರೀರಾಮುಲು ಸಹೋದರಿ ಶಾಂತಾ, ಜಮಖಂಡಿಯಲ್ಲಿ ಮಾಜಿ ಸಚಿವ ದಿ.ಸಿದ್ದು ನ್ಯಾಮಗೌಡ ಪುತ್ರ ಆನಂದ್ ನ್ಯಾಮಗೌಡ, ಬಿಜೆಪಿಯ ಶ್ರೀಕಾಂತ ಕುಲಕರ್ಣಿ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಚುನಾವಣೆಯಲ್ಲಿ ವಿಕಲಾಂಗರಿಗೆ ಮನೆಯಿಂದ ಮತಗಟ್ಟೆಗೆ ಕರೆದೊಯ್ಯುವ ವ್ಯವಸ್ಥೆ ಮತ್ತು ಮಹಿಳೆಯರಿಗಾಗಿ ಪಿಂಕ್ ಮತಗಟ್ಟೆಗಳನ್ನೂ ಚುನಾವಣೆ ಆಯೋಗ ತೆರೆದಿದ್ದು, ಐದು ಕ್ಷೇತ್ರಗಳಲ್ಲಿ ಮಹಿಳೆಯರಿಗೆ 57 ಪಿಂಕ್ ಮತಕೇಂದ್ರಗಳನ್ನು ತೆರೆದಿದೆ. ಪಿಡಬ್ಲ್ಯೂಡಿ ಇಲಾಖೆ ಉದ್ಯೋಗಿಗಳನ್ನು ಮತದಾನ ಪ್ರಕ್ರಿಯೆಗೆ ನಿಯೋಜಿಸಲಾಗಿದ್ದು, ಐದು ಕ್ಷೇತ್ರಗಳಲ್ಲಿ 6,453 ಮತಗಟ್ಟೆಗಳಿವೆ. ಅದರಲ್ಲಿ 1,502 ಸೂಕ್ಷ್ಮ ಮತಗಟ್ಟೆಗಳಿದ್ದು, ಒಟ್ಟು 1,312 ವೀಕ್ಷಕರನ್ನು ನೇಮಕ ಮಾಡಲಾಗಿದೆ. 5 ಕ್ಷೇತ್ರಗಳಲ್ಲಿ ಒಟ್ಟಾರೆ 168 ಫ್ಲೈಯಿಂಗ್ ಸ್ಕ್ವಾಡ್ ರಚನೆ ಮಾಡಲಾಗಿದೆ.
ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಚಂದ್ರಶೇಖರ್ ಅವರು ನಿವೃತ್ತಿ ಘೋಷಿಸಿದ್ದರಿಂದ ಬಿಜೆಪಿಗೆ ಹಿನ್ನಡೆಯುಂಟಾಗಿದೆ. ಅಲ್ಲಿ ಮತದಾನ “ಒನ್ ಸೈಡೆಡ್’ ಎಂಬಂತಾಗಿದೆ. ಇನ್ನು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಎಲ್.ಆರ್. ಶಿವರಾಮೇಗೌಡ ಹಾಗೂ ಬಿಜೆಪಿಯ ಸಿದ್ದರಾಮಯ್ಯ ನಡುವೆ ನೇರ ಹಣಾಹಣಿಯಿದೆ.
ಮತದಾನ ಸ್ಥಳಗಳು:
1. ಮಂಡ್ಯ(ಲೋಕಸಭೆ)
2. ಶಿವಮೊಗ್ಗ(ಲೋಕಸಭೆ)
3. ಬಳ್ಳಾರಿ(ಲೋಕಸಭೆ)
4. ರಾಮನಗರ(ವಿಧಾನಸಭೆ)
5. ಜಮಖಂಡಿ(ವಿಧಾನಸಭೆ)
ಅಭ್ಯರ್ಥಿಗಳ ಸಂಖ್ಯೆ:
* ಬಳ್ಳಾರಿ: 7
* ಶಿವಮೊಗ್ಗ: 4
* ಮಂಡ್ಯ: 9
* ಜಮಖಂಡಿ: 10
By Election,voting,start,BJP,Congress-JDS Alliance