ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸರು ಸ್ಥಾಪಿಸಿದ್ದ ಆಝಾದ್ ಹಿಂದ್ ಫೌಜ್ ನ 75 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಹಣ ಹಾಗೂ ಫಲಕ ಅನಾವರಣ ಮಾಡಿ ಮಾತನಾಡಿದ ಪ್ರಧಾನಿ ಮೋದಿ,ದೇಶಕ್ಕಾಗಿ ತಮ್ಮ ಜೀವವನ್ನೇ ನೀಡಿದ ಮಹಾನುಭಾವರಿಗೆ ನಾನು ತಲೆಬಾಗಿ ನಮಿಸುತ್ತೇನೆ. ಆಜಾದ್ ಹಿಂದ್ ಸರ್ಕಾರದ ಕರ್ತೃ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರು ಬ್ರಿಟಿಷರ ವಿರುದ್ಧ ಜನರನ್ನು ಒಟ್ಟುಗೂಡಿಸಿದರು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನೇತಾಜಿಯವರು ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂಗ್ಲಿಷರ ವಿರುದ್ಧ ಸಶಸ್ತ್ರ ಹೋರಾಟ ಪ್ರಾರಂಭಿಸಿದರು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರ ವಿಚಾರ ಧಾರೆಗಳಿಂದ ಸುಭ್ಹಾಷ್ ಚಂದ್ರ ಭೋಸ್ ಅವರು ಸ್ಫೂರ್ತಿ ಪಡೆದುಕೊಂಡಿದ್ದರು. ಅವರಲ್ಲಿನ ದೇಶಾಭಿಮಾನ ನಮಗೆಲ್ಲ ಆದರ್ಶ. ದಕ್ಷಿಣ ಆಫ್ರಿಕಾದ ವಿದ್ಯಾರ್ಥಿ ಚಳುವಳಿಯ ನಾಯಕರು ಬೋಸರನ್ನು ತಮ್ಮ ಹಿರೋ ಎಂದು ಪರಿಗಣಿಸಿದ್ದರೆಂದು ನೆಲ್ಸನ್ ಮಂಡೇಲಾ ಬೋಸರ ಬಗ್ಗೆ ಹೇಳಿದ್ದರು. ಪ್ರತಿಯೊಬ್ಬರಿಗೂ ಸಮಾನ ಹಕ್ಕು ಹಾಗೂ ಅವಕಾಶಗಳಿರುವ, ತನ್ನ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಇರುವ ಎಲ್ಲಾ ರಂಗಗಳಲ್ಲಿಯೂ ಬೆಳವಣಿಗೆ ಸಾಧಿಸುವ ಸಂವೃದ್ಧ ರಾಷ್ಟ್ರದ ಕಲ್ಪನೆಯನ್ನು ಬೋಸರು ಹೊಂದಿದ್ದರು. ಭಾರತ ಇಂದು ಅಭಿವೃದ್ಧಿಯತ್ತ ಸಾಗಿದೆ ಆದರೆ ನೇತಾಜಿ ಕಂಡಿದ್ದ ಭಾರತವನ್ನು ನಾವು ಇನ್ನೂ ನೋಡಿಲ್ಲ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಗೌರವಾರ್ಥವಾಗಿ ಇನ್ನು ಮುಂದೆ ಪ್ರಶಸ್ತಿ ನೀಡಲಾಗುವುದು ಎಂದು ಪ್ರಧಾನಿ ಘೋಷಿಸಿದರು.
ನೇತಾಜಿ ಅವರು ನಮ್ಮ ದೇಶದ ಈಶಾನ್ಯ ಭಾಗದ ಮಹತ್ವವನ್ನು ಅರಿತಿದ್ದರು. ಈಗ ನಮ್ಮ ಸರ್ಕಾರ ಆ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲು ನಿರ್ಧರಿಸಿದೆ. ಆಗ ನೇತಾಜಿಯವರು ಕಟ್ಟಿದ್ದ ಸೇನೆಯ ಮಾದರಿಯಲ್ಲಿ ಈಗ ಭಾರತದ ಸೈನ್ಯವನ್ನು ರೂಪಿಸಲಾಗುತ್ತಿದೆ ಎಂದರು.
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸುಭಾಷ್ ಚಂದ್ರ ಭೋಸ್ ಅವರ ಸಂಬಂಧಿ ಚಂದ್ರ ಕುಮಾರ್ ಭೋಸ್, ಐಎನ್ಎ ಹಿರಿಯ ಮುಖಂಡ ಲಾಲ್ತಿ ರಾಮ್ ಮತ್ತಿತರರು ಭಾಗವಹಿಸಿದ್ದರು.
Netaji Subhash Chandra Bose, Azad Hind Fauj, PM Narendra Modi, hoists Tricolour at historic Red Fort