ನವದೆಹಲಿ: ಭಾರತ ಮತ್ತು ಅಮೆರಿಕ ಮಹತ್ತರ ರಾಜತಾಂತ್ರಿಕ ಹೆಜ್ಜೆಯಿಟ್ಟಿದ್ದು, ಉಭಯ ದೇಶಗಳ ರಕ್ಷಣಾ ಹಾಗೂ ವಿದೇಶಾಂಗ ಸಚಿವಾಲಯಗಳ ನಡುವೆ ಮಾತುಕತೆಗೆ ವೇದಿಕೆ ಸಿದ್ದವಾಗಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ನಡುವೆ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೋ ನಡುವೆ ಸೆಪ್ಟಂಬರ್ 6ರಂದು ಮಹತ್ವದ ಮಾತುಕತೆಗಳು ನಡೆಯಲಿದ್ದು, ‘ಭಾರತ-ಅಮೆರಿಕ 2+2 ಮಾತುಕತೆಗೆ ರಾಷ್ಟ್ರ ರಾಜಧಾನಿ ಸಜ್ಜಾಗಿದೆ.
ಉಭಯ ರಾಷ್ಟ್ರದ ಪ್ರಮುಖರ ಜತೆ 3 ಸಭೆಗಳು ನಡೆಯಲಿವೆ.ಮೊದಲ ಎರಡು ಸಭೆಗಳು ಏಕಕಾಲದಲ್ಲಿ ನಡೆಯಲಿದ್ದು, ಆಯಾ ಸಚಿವಾಲಯಕ್ಕೆ ಸಂಬಂಧಿಸಿದ ಉಭಯ ರಾಷ್ಟ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ. ಮೂರನೇ ಸಭೆಯಲ್ಲಿ ನಾಲ್ವರು ಜತೆಯಾಗಿ ಭಾಗವಹಿಸಲಿದ್ದಾರೆ
ಸಭೆಯಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಎರಡೂ ರಾಷ್ಟ್ರಗಳ ಸಹಕಾರವನ್ನು ಮತ್ತಷ್ಟು ಪ್ರಬಲಗೊಳಿಸುವ ನಿಟ್ಟಿನಲ್ಲಿ ಒಪ್ಪಂದ, ತಾಂತ್ರಿಕ ವಲಯದ ರಕ್ಷಣಾ ಒಪ್ಪಂದ, ಭಾರತದಲ್ಲಿ ಅಮೆರಿಕದ ಶಸ್ತ್ರಾಸ್ತ್ರಗಳ ಉತ್ಪಾದನೆ, ಉಭಯ ರಾಷ್ಟ್ರಗಳ ನಡುವಣ ಶಸ್ತ್ರಾಸ್ತ್ರ ಪಡೆಗಳ ಅಭ್ಯಾಸ, ಬಹರೈನ್ನ ಅಮೆರಿಕ ಸೆಂಟ್ರಲ್ ಕಮಾಂಡ್ನಲ್ಲಿ ಭಾರತೀಯ ಶಸ್ತ್ರಾಸ್ತ್ರ ಪಡೆ ಅಧಿಕಾರಿ ನಿಯೋಜನೆ. ಈ ಮೂಲಕ ಪಾಕಿಸ್ತಾನದ ಮೇಲೆ ನಿಗಾ ಇರಿಸುವ ಕುರಿತು ಚರ್ಚೆ, ಸಮುದ್ರ ವಲಯದಿಂದ ಸಂಭವಿಸಬಹುದಾದ ಅಪಾಯಗಳ ಬಗೆಗಿನ ಮುನ್ನಚ್ಚರಿಕೆ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ವಿಪತ್ತು ನಿರ್ವಹಣಾ ಕೇಂದ್ರ ಸ್ಥಾಪನೆ. ರಕ್ಷಣಾ ಉದ್ಯಮ ಕೇಂದ್ರ ಸ್ಥಾಪನೆ ಹಾಗೂ ಭಾರತ ಮತ್ತು ಅಫ್ಘಾನಿಸ್ತಾನದಲ್ಲಿ ಉಗ್ರ ಕೃತ್ಯಕ್ಕೆ ಪಾಕಿಸ್ತಾನದ ಬೆಂಬಲ, ದಕ್ಷಿಣ ಚೀನಾ ಸಮುದ್ರ ಮತ್ತು ಹಿಂದೂ ಮಹಾಸಾಗರದ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಚೀನಾ ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ಮಾತುಕತೆ ನಡೆಯಲಿದೆ.
ಇದೇ ವೇಳೆ ಅಮೆರಿಕವು ಇರಾನ್ ಮತ್ತು ರಷ್ಯಾದಿಂದ ಎದುರಿಸುತ್ತಿರುವ ಆತಂಕಗಳ ವಿಚಾರವನ್ನು ತೆರೆದಿಡಲಿದೆ ಎನ್ನಲಾಗಿದೆ.
India, US hold first ‘2+2 dialogue’ on September 6