ತಿರುವನಂತಪುರಂ:ಆ-16: ಕೇರಳದಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಉಂಟಾದ ಪ್ರವಾಹದಿಂದ ಜನರನ್ನು ರಕ್ಷಿಸಲು ಭಾರತೀಯ ಸೇನೆ ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಉಕ್ಕಿ ಬರುವ ನೀರಿಗೆ ಅಡ್ಡಲಾಗಿ ನಿಂತ ಸೈನಿಕರು ಸೇತುವೆ ನಿರ್ಮಿಸಿ, ಸಂತ್ರಸ್ಥರಾಗಿದ್ದ ನೂರಾರು ಮಂದಿಯನ್ನು ರಕ್ಷಿಸಿದ್ದಾರೆ.
ಮಲಪ್ಪುಳದಲ್ಲಿ ಭಾರತೀಯ ಸೇನೆ ಮತ್ತೊಮ್ಮೆ ತನ್ನ ತಾಕತ್ತು ಪ್ರದರ್ಶಿಸಿದ್ದು, ಪ್ರವಾಹದಿಂದಾಗಿ ಬಾಹ್ಯ ಜಗತ್ತಿನ ಸಂಪರ್ಕವನ್ನೇ ಕಡಿದುಕೊಂಡು ಅಪಾಯಕ್ಕೆ ಸಿಲುಕಿದ್ದ ಒಂದಿಡೀ ಗ್ರಾಮದ ಜನರನ್ನು ಗುರುತಿಸಿ ರಕ್ಷಿಸಿದ್ದಾರೆ.
ಕೇರಳದ ಮಲಪ್ಪುಳದ ವಲಿಯಕಾಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭೀಕರ ಪ್ರವಾಹದಿಂದಾಗಿ ವಲಿಯಕಾಡು ಗ್ರಾಮದ ಸುಮಾರು 100ಕ್ಕೂ ಅಧಿಕ ಗ್ರಾಮಸ್ಥರು ಅಪಾಯಕ್ಕೆ ಸಿಲುಕಿದ್ದರು. ಈ ವೇಳೆ ಇಲ್ಲಿ ರಕ್ಷಣಾ ಕಾರ್ಯಾಚರಣೆ ನಿಮಿತ್ತ ಆಗಮಿಸಿದ ಸೈನಿಕರಿಗೆ ಗ್ರಾಮಸ್ಥರ ಇರುವಿಕೆ ತಿಳಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗ್ರಾಮಸ್ಥರನ್ನು ರಕ್ಷಿಸಲು ಪ್ರವಾಹದ ನೀರಿಗೆ ಅಡ್ಡಲಾಗಿ ಸ್ಥಳದಲ್ಲೇ ಸುಮಾರು 35 ಅಡಿ ಉದ್ದದ ಸೇತುವೆ ನಿರ್ಮಿಸಿದ ಸೈನಿಕರು ಅದರ ಮೂಲಕ ಒಬೊಬ್ಬರನ್ನಾಗಿ ಸುಮಾರು 100 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದಾರೆ.
ಕೇರಳದಲ್ಲಿ ಈ ವರೆಗೂ ಮಳೆ ದುರಂತದಲ್ಲಿ ಸಾವನ್ನಪ್ಪಿದ ಸಂಖ್ಯೆ 79ಕ್ಕೆ ಏರಿಕೆಯಾಗಿದ್ದು, ಸಾಕಷ್ಟು ಪ್ರದೇಶಗಳಲ್ಲಿ ಸಾವಿರಾರು ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ. ಅಪಾಯದಲ್ಲಿರುವವರನ್ನು ಭಾರತೀಯ ಸೇನೆಯ ಸೈನಿಕರು ಮತ್ತು ಎನ್ ಡಿಆರ್ ಎಫ್ ತಂಡದ ಸಿಬ್ಬಂದಿಗಳು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
Kerala,Army built a 35 feet long bridge,rescued 100 people