ಕೇರಳದಲ್ಲಿ ಭಾರೀ ಮಳೆ; ಪ್ರವಾಹ: ಒಂದೇ ದಿನ 25 ಜನ ಬಲಿ

ತಿರುವನಂತಪುರಂ:ಆ-16: ಕೇರಳದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಬುಧವಾರ ಒಂದೇ ದಿನ 25 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈ ವರೆಗೂ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ.

ಒಟ್ಟು 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳು ತೀವ್ರ ನೆರೆ ಸಂಕಷ್ಟಕ್ಕೆ ಸಿಲುಕಿದ್ದು ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಇನ್ನೂ 24 ಗಂಟೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದ ಬಹುತೇಕ ಎಲ್ಲಾ ಡ್ಯಾಂಗಳಿಂದ ನೀರು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ, ನೆರೆ ಪರಿಸ್ಥಿತಿ ಹೆಚ್ಚಾಗಿದೆ. ಕಣ್ಣೂರ್‌, ವಯನಾಡ್‌, ಕೋಯಿಕ್ಕೋಡ್‌ ಜಿಲ್ಲೆಗಳ ಬಹುತೇಕ ಭಾಗಗಳು ಜಲಾವೃತವಾಗಿದೆ. ಭೂ ಕುಸಿತ, ಮನೆ ಕುಸಿತ ಪ್ರಕರಣಗಳು ವರದಿಯಾಗಿವೆ. ಇಡುಕ್ಕಿಯಲ್ಲಿ ಮಲಪ್ಪುರಂ ಮತ್ತು ಕೋಯಿಕ್ಕೋಡ್‌ನಲ್ಲಿ ಐದು ಮಂದಿ ಕಾಣೆಯಾಗಿದ್ದಾರೆ. ನೆರೆ ಪೀಡಿತ ಜಿಲ್ಲೆಗಳಲ್ಲಿ ಮತ್ತಷ್ಟು ಮಂದಿಯನ್ನು ಗಂಜಿ ಕೇಂದ್ರಗಳಿಗೆ ರವಾನಿಸಲಾಗಿದೆ. ಆದರೆ, ನೆರೆಯಿಂದ ಗಂಜಿ ಕೇಂದ್ರಗಳೂ ಕೊಚ್ಚಿಹೋಗುವ ಭೀತಿ ಎದುರಾಗಿದೆ.

ಈ ಮಧ್ಯೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ರಾಜ್ಯದ ಪರಿಸ್ಥಿತಿಯನ್ನು ಅತ್ಯಂತ ಗಂಭೀರ ಎಂದು ಬಣ್ಣಿಸಿದ್ದು, ಸಂಕಷ್ಟ ಎದುರಿಸಲು ಸರಕಾರದೊಂದಿಗೆ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

ಕಳೆದ 94 ವರ್ಷದಲ್ಲೇ ಅತ್ಯಂತ ಭೀಕರ ನೆರೆ ಹಾವಳಿ ಕೇರಳದಲ್ಲಿ ಸಂಭವಿಸಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲಾ 35 ಡ್ಯಾಂಗಳ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ವಿದ್ಯುತ್‌, ದೂರವಾಣಿ, ರಸ್ತೆ, ರೈಲು ಸಂಪರ್ಕಗಳು ಸಂಪೂರ್ಣ ಕಡಿತಗೊಂಡಿದ್ದು, ಜನರು ಪರದಾಡುವಂತಾಗಿದೆ. ಸಿಎಂ ಪಿಣರಾಯಿ ವಿಜಯನ್‌ ಪ್ರಧಾನಿ ಹಾಗೂ ಕೇಂದ್ರಗೃಹಸಚಿವರಿಗೆ ಕರೆ ಮಾಡಿ, ಮತ್ತಷ್ಟು ಸೇನಾಪಡೆ, ರಕ್ಷಣಾ ಸಲಕರಣೆ ನೀಡುವಂತೆ ಮೊರೆಯಿಟ್ಟಿದ್ದಾರೆ.

ಪುಣೆಯಿಂದ ಕೇರಳಕ್ಕೆ 4 ಹೆಚ್ಚುವರಿ ಎನ್‌ಡಿಆರ್‌ಎಫ್‌ ತಂಡಗಳ ರವಾನೆ ಮಾಡಲಾಗಿದೆ. ಭಾರಿ ಮಳೆ ಮತ್ತು ನೆರೆಯಿಂದಾಗಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಶನಿವಾರದವರೆಗೂ ಬಂದ್‌ ಮಾಡಲಾಗಿದೆ. ಹೀಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದ್ದ ಹಾಗೂ ಅಲ್ಲಿಂದ ಇಲ್ಲಿಗೆ ಆಗಮಿಸಲಿದ್ದ 10 ವಿಮಾನಗಳ ಹಾರಾಟ ರದ್ದುಗೊಂಡಿದೆ.

ತೀವ್ರ ಮಳೆಯಿಂದ ಏರ್‌ಪೋರ್ಟ್‌ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ರನ್‌ ವೇ, ಟ್ಯಾಕ್ಸಿ ವೇ, ಪಾರ್ಕಿಂಗ್‌ ಸೇರಿದಂತೆ ಎಲ್ಲೆಡೆ ಭಾರಿ ಪ್ರಮಾಣದಲ್ಲಿ ನೀರು ನಿಂತಿದೆ.
kerala,25 people dead,rain related incidents

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ