ಕೇರಳದ ವಯನಾಡು ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭೀತಿ: ಇಬ್ಬರಲ್ಲಿ ಸೋಂಕು

ವೈಯನಾಡು: ಕರ್ನಾಟಕದ ಶಿವಮುಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿ ಹಲವರನ್ನು ಬಲಿಪಡೆದುಕೊಂಡಿದ್ದ ಮಾರಣಾಂತಿಕ ಮಂಗನ ಕಾಯಿಲೆ ಈಗ ಕೇರಳಕ್ಕೆ ವ್ಯಾಪಿಸಿದ್ದು, ವ್ಯಕ್ತಿಯೊಬ್ಬರಲ್ಲಿ ಮಂಗನ ಜ್ವರದ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೇರಳದ ವಯನಾಡಿನಲ್ಲಿ ಮಂಗನ ಕಾಯಿಲೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಓರ್ವ ವ್ಯಕ್ತಿಗೆ ಮಂಗನ ಕಾಯಿಲೆ ಸೋಂಕಿರುವುದು ದೃಢಪಟ್ಟಿದ್ದು, ಮತ್ತೊಬ್ಬ ರೋಗಿಯಲ್ಲೂ ಇದೇ ಮಾದರಿಯ ಲಕ್ಷಣಗಳು ಕಂಡು ಬಂದಿದೆ.

ವಯನಾಡಿನ ಅರನಪ್ಪಾರ ಬಳಿಯ ಅತಟ್ಟುಕುನ್ನು ಕಾಲೋನಿಯ 36 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ರಕ್ತದ ಮಾದರಿಗಳನ್ನು ಪರಿಶೀಲಿಸಿದಾಗ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಆದರೆ, ರೋಗಿ ಅಪಾಯದಿಂದ ಪಾರಾಗಿದ್ದಾರೆ.

ಇನ್ನೊಂದೆಡೆ ತೋನಿಕ್ಕಡವು ಬಳಿಯ 27 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯದ ಹಿನ್ನೆಲೆಯಲ್ಲಿ ಕೋಯಿಕ್ಕೋಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಅವರಲ್ಲಿಯೂ ಮಂಗನ ಕಾಯಿಲೆಯ ಲಕ್ಷಣಗಳು ಗೋಚರಿಸಿವೆ. ಆದರೆ, ಇನ್ನೂ ದೃಢಪಟ್ಟಿಲ್ಲ.

ಕರ್ನಾಟಕದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಾಗಿನಿಂದ ವಯನಾಡು ಜಿಲ್ಲೆಯಲ್ಲಿ ಕಟ್ಟೆಚ್ಚರ ವಿಧಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ನೀಡಲಾಗುತ್ತಿರುವ ಲಸಿಕೆಯನ್ನು ಜಿಲ್ಲೆಯಲ್ಲಿ ನೀಡುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಕೇರಳ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್​ ಸದಾನಂದನ್​ ತಿಳಿಸಿದ್ದಾರೆ.
Monkey fever case confirmed in Wayanad, Kerala

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ