ಕೇರಳದಲ್ಲಿ ವರುಣನ ರೌದ್ರಾವತಾರ: ಒಂದೇ ದಿನ 100 ಜನರ ಸಾವು

ತಿರುವನಂತಪುರಂ:ಆ-17: ಮಹಾಮಳೆಯ ರೌದ್ರಾವತಾರಕ್ಕೆ ತತ್ತರಿಸಿಹೋಗಿರುವ ಕೇರಳದಲ್ಲಿ ಒಂದೇ ದಿನದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಈ ವರೆಗೆ ರಾಜ್ಯದಲ್ಲಿ ಮಳೆ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದವರ ಸಂಖ್ಯೆ 173ಕ್ಕೆ ಏರಿಕೆಯಾಗಿದೆ.

ದೇವರನಾಡು ಅಕ್ಷರಶ: ಪ್ರವಾಹಕ್ಕೆ ಸಿಲುಕಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂದಿದೆ. ಎಲ್ಲೆಲ್ಲೂ ರಕ್ಷಣೆಗಾಗಿ ಜನರು ಮೊರೆಯಿಡುತ್ತಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಧಾರಾಕರ ಮಳೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಎಸ್ ಟಿಆರ್ ಎಫ್ ನೀಡಿರುವ ಮಾಹಿತಿ ಪ್ರಕಾರ 24 ಗಂಟೆಗಳಲ್ಲಿ ಕೇರಳದಲ್ಲಿ 100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಇನ್ನು ಸಂತ್ರಸ್ತರ ರಕ್ಷಣೆಗೆ ಭಾರತೀಯ ಸೇನೆಯ ಕಾಲ್ದಳ, ವಾಯುದಳ ಮತ್ತು ನೌಕಾದಳಗಳ ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸುತ್ತಿದ್ದರೂ, ಸಾವಿನ ಸಂಖ್ಯೆ ಮಾತ್ರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.

ಹೀಗಾಗಿ ಕೇರಳಕ್ಕೆ ಹೆಚ್ಚುವರಿಯಾಗಿ 43 ಎನ್ ಡಿಆರ್ ಎಫ್ ತಂಡಗಳನ್ನು ರವಾನೆ ಮಾಡಲಾಗಿದ್ದು, ಇದರ ಜೊತೆಗೆ 420 ಸಿಬ್ಬಂದಿಗಳು, 23 ಹೆಲಿಕಾಪ್ಟರ್ ಗಳನ್ನು ಮತ್ತು 200 ಯಾಂತ್ರಿಕ ಬೋಟ್ ಗಳನ್ನು ಕೇರಳಕ್ಕೆ ರವಾನೆ ಮಾಡಲು ನಿರ್ಧರಿಸಲಾಗಿದೆ. ಅಂತೆಯೇ ಕೊಚ್ಚಿ ವಿಮಾನ ನಿಲ್ದಾಣ ಆಗಸ್ಟ್ 26ರವರೆಗೂ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ನೆರೆಪೀಡಿತ ಪಟ್ಟಣಮ್ ತಿಟ್ಟಕ್ಕೆ ರಕ್ಷಣಾ ಕಾರ್ಯಾಚರಣೆಗೆ 10 ಬೋಟ್ ಗಳನ್ನು ರವಾನಿಸಲಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ ಡಿಆರ್ ಎಫ್ ನ 540 ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ. ತಿರುವನಂತಪುರ, ಎರ್ನಾಕುಲಂ, ಕೊಲ್ಲಮ್ ಮತ್ತು ಆಲಪ್ಪುಳ ಜಿಲ್ಲೆಗಳ ಮೀನುಗಾರರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿದು ಹೋಗಿದೆ. ಚಾಲಕ್ಕುಡಿ, ಪೆರಿಯಾರ್ ನದಿ ದಂಡೆಯಲ್ಲಿ ಸಿಲುಕಿಕೊಂಡವರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತದೆ. ಇನ್ನು ಚೆಂಗನ್ನೂರು ಶ್ರೀ ಅಯ್ಯಪ್ಪ ಕಾಲೇಜು ಹಾಸ್ಟೆಲ್ ನಲ್ಲಿ 30 ಮಂದಿ ವಿದ್ಯಾರ್ಥಿನಿಯರು ಹೊರಬರಲಾರದೆ ಸಿಲುಕಿಕೊಂಡಿರುವ ಘಟನೆ ವರದಿಯಾಗಿದೆ.

Kerala,Mansoon,Heavy Rain,100 dead one day

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ