ಕೋಲ್ಕತಾ: ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿದ್ದೇವೆ ಎಂಬ ಕಾರಣಕ್ಕೆ ಬಿಜೆಪಿ ನಾಯಕರು ಎನ್ ಕೌಂಟರ್ ಬೆದರಿಕೆ ಹಾಕುತ್ತಿದ್ದಾರೆ ಎಂದು ಗುರುವಾರ ಆರೋಪಿಸಿದ್ದಾರೆ.
ಇಂದು ಪಕ್ಷದ ಕೋರ್ ಕಮಿಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ನಮ್ಮದು ಬಿಜೆಪಿ ರೀತಿ ಉಗ್ರ ಸಂಘಟನೆ ಅಲ್ಲ. ಅವರು ಕೇವಲ ಕ್ರಿಶ್ಚಿಯನ್ನರು, ಮುಸ್ಲಿಮರ ನಡುವೆ ಘರ್ಷಣೆಗಳನ್ನು ಏರ್ಪಡಿಸುತ್ತಿಲ್ಲ, ಹಿಂದೂಗಳ ನಡುವೆಯೂ ಘರ್ಷಣೆ ಮೂಡುವಂತೆ ಮಾಡುತ್ತಿದ್ದಾರೆ ಎಂದರು.
‘ಅವರು ದೆಹಲಿಯಲ್ಲಿ ಅಧಿಕಾರದಲ್ಲಿದ್ದೇವೆ ಎಂಬ ಕಾರಣಕ್ಕೆ ಎನ್ ಕೌಂಟರ್ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ ಬಾಂಬ್ ಎಸೆಯುವ ಮಾತನಾಡುತ್ತಿದ್ದಾರೆ. ಆದರೆ ತಾಕತ್ತಿದ್ದರೆ ನಮ್ಮನ್ನು ಟಚ್ ಮಾಡಿ. ನಾವು ನಿಮಗೆ ಕೃಷ್ಣ ಜನ್ಮಸ್ಥಳ ತೋರಿಸುತ್ತೇವೆ’ ಸಿಎಂ ಎಚ್ಚರಿಸಿದ್ದಾರೆ.
ಇನ್ನು ಮೂರು ಅಥವಾ ಆರು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಚುನಾವಣೆಗೆ ಸಿದ್ಧವಾಗಿರಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಕಳೆದ ಜೂನ್ 19ರಂದು ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು, ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡುವ ಟಿಎಂಸಿ ನಾಯಕರು ಜೈಲು ಸೇರುತ್ತಾರೆ ಅಥವಾ ನೇರವಾಗಿ ಎನ್ ಕೌಂಟರ್ ಗೆ ಗುರಿಯಾಗುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.