ಬೆಂಗಳೂರು, ಆ.10- ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರಸ್ತೆಗೆ ಚೆಲ್ಲುತ್ತಿದ್ದಾರೆ. ಬಿಜೆಪಿ ಸರ್ಕಾರ ಪರಿಹಾರ ನೀಡದೆ ಅವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆತುರಕ್ಕೆ ಬಿದ್ದು ತಾವು ಟೀಕೆ ಮಾಡುವುದಿಲ್ಲ. ಹೊಸ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಹಾರ ತುರಾಯಿ ಸನ್ಮಾನದಲ್ಲೇ ಕಾಲಹರಣ ಮಾಡಬಾರದು. ಕೋವಿಡ್ ನಿಯಂತ್ರಣಕ್ಕೆ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕು. ಎಲ್ಲಾ ಸಚಿವರು ಉಸ್ತುವಾರಿ ಜಿಲ್ಲೆಗೆ ತೆರಳಿ ಪ್ರಗತಿ ಪರಿಶೀಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ. ಈ ಹಿಂದೆ ಆರ್ಥಿಕ ನೆರವು ಘೋಷಿಸಿದ ಸರ್ಕಾರ ಅದನ್ನು ಸರಿಯಾಗಿ ಫಲಾನುಭವಿಗಳಿಗೆ ತಲುಪಿಸಿಲ್ಲ. ಮುಂದಿನ ದಿನಗಳಲ್ಲಾದರೂ ವೃತ್ತಿನಿರತರಿಗೆ, ರೈತರಿಗೆ ಯಾವ ರೀತಿ ಸಹಾಯ ಮಾಡಲಿದೆ ಎಂದು ಕಾದು ನೋಡುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕರ್ನಾಟಕದವರೇ ಆಗಿದ್ದು, ಆ ಭಾಗದ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ನೆರೆ ಸೇರಿದಂತೆ ಹಲವು ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಹೊಸ ಸರ್ಕಾರ ಕೂಡಲೇ ಸಂತ್ರಸ್ಥರ ನೆರವಿಗೆ ಧಾವಿಸಲಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲಿನ ಜಾರಿ ನಿರ್ದೇನಾಲಯ (ಇಡಿ)ದ ಅಧಿಕಾರಿಗಳ ದಾಳಿ ಕುರಿತು ಈ ಮೊದಲೇ ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಜಮೀರ್ ಅವರು ಖಾಸಗಿಯಾಗಿ ಭೇಟಿ ಮಾಡಿದರೆ ನನ್ನ ಅನುಭವವನ್ನು ಹೇಳುತ್ತೇನೆ. ಈ ಕುರಿತು ಸಾರ್ವಜನಿಕವಾಗಿ ಚರ್ಚಿಸಲು ಬಯಸುವುದಿಲ್ಲ ಎಂದು ಹೇಳಿದರು.
ತಮ್ಮ ಮನೆಯ ಮೇಲೆ ದಾಳಿಯಾಗಲು ಜೆಡಿಎಸ್ನ ಕುಮಾರಸ್ವಾಮಿ ಕಾರಣ ಎಂದು ಜಮೀರ್ ಅಹಮದ್ ಖಾನ್ ಹೇಳಿರುವುದಕ್ಕೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಯಾರು ಯಾರ ಮೇಲಾದರೂ ಹೇಳಿಕೆ ನೀಡಿದರೆ ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.