![yeddyurappa](http://kannada.vartamitra.com/wp-content/uploads/2018/05/yeddyurappa-610x381.jpg)
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಸುಮ್ಮನೆ ಕೂರದ ನಿಕಟಪೂರ್ವ ಸಿಎಂ ಬಿ.ಎಸ್. ಯಡಿಯೂರಪ್ಪ, ಪಕ್ಷ ಸಂಘಟನೆಯಲ್ಲಿ ತೊಡಗುವುದಾಗಿ ಘೋಷಿಸಿದರು.
ಗುರುವಾರ ಸಂಜೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯ ಕೇಶವಕೃಪಾಗೆ ಭೇಟಿ ನೀಡಿ, ವರಿಷ್ಠರಾದ ಸಿ.ಆರ್. ಮುಕುಂದ, ವಿ.ನಾಗರಾಜ ಸೇರಿದಂತೆ ಹಲವರೊಂದಿಗೆ ಸುಮಾರು 2 ತಾಸು ಸಮಾಲೋಚಿಸಿದರು.
ಬಳಿಕ ಸುದ್ದಿಗಾರರೊಟ್ಟಿಗೆ ಮಾತನಾಡಿದ ಅವರು, ಬಹಳ ದಿನಗಳ ನಂತರ ನಮ್ಮ ಸಂಘ-ಪರಿವಾರದ ಎಲ್ಲ ಹಿರಿಯರ ಜತೆ ಚರ್ಚೆ ಮಾಡಿರುವೆ. ರಾಜ್ಯದಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳು ಆಗಿವೆ, ಇನ್ನು ಮುಂದೆ ಏನು ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಮನವರಿಕೆ ಮಾಡಲು ಪ್ರಯತ್ನಿಸಿದ್ದೇನೆ ಎಂದರು.
ಅಧಿಕಾರ ಇಲ್ಲದೆಯೂ ಒಳ್ಳೆಯ ಕೆಲಸ
ಗಣಪತಿ ಹಬ್ಬದ ನಂತರ ಪ್ರತಿ ವಾರಕ್ಕೊಂದು ದಿನ ಜಿಲ್ಲಾ ಪ್ರವಾಸ ಕೈಗೊಳ್ಳುವೆ. ಕಾರ್ಯಕರ್ತರ ಸಭೆ ನಡೆಸುತ್ತೇನೆ. ಇಲ್ಲದ ಜಾಗದಲ್ಲಿ ಯೋಗ್ಯ ಅಭ್ಯರ್ಥಿ ಗುರುತಿಸುತ್ತೇನೆ. ಸಂಘಟನೆ ಬಲಪಡಿಸಿ ಮುಂಬರುವ ಚುನಾವಣೆಯಲ್ಲಿ 135-140 ಸೀಟುಗಳನ್ನು ಗೆದ್ದು ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆನ್ನುವ ಸಂಕಲ್ಪ ಇದೆ. ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡುತ್ತೇನೆ. ಅಕಾರ, ಸ್ಥಾನಮಾನ ಇಲ್ಲದೆಯೂ ಒಳ್ಳೆಯ ಕೆಲಸ ಮಾಡಬೇಕೆಂದುಕೊಂಡಿದ್ದೇನೆ ಎಂದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಇದ್ದರು.
ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ ಕುಟುಂಬಕ್ಕೆ ಸಾಂತ್ವನ
ತಮ್ಮ ರಾಜೀನಾಮೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಗುಂಡ್ಲುಪೇಟೆಯ ರವಿ ಮನೆಗೆ ಭೇಟಿ ನೀಡುವುದಾಗಿ ಹೇಳಿದ ಬಿಎಸ್ವೈ, ಯಾವುದೇ ಕಾರಣಕ್ಕೂ ಈ ರೀತಿ ತಪ್ಪು ನಿರ್ಧಾರ ತೆಗೆದುಕೊಳ್ಳಬಾರದು. ಅವರ ಕುಟುಂಬಕ್ಕೆ ಸಾಂತ್ವನ ಹೇಳುವುದು ನನ್ನ ಕರ್ತವ್ಯ. ಶುಕ್ರವಾರ ಅವರ ಮನೆಗೆ ಹೋಗಿ ಸಾಂತ್ವನ ಹೇಳಿ ಬರುತ್ತೇನೆ ಎಂದರು.
ಚೊಚ್ಚಲ ಸಂಪುಟ ನಿರ್ಣಯಕ್ಕೆ ಮೆಚ್ಚುಗೆ
ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಅತ್ಯಂತ ಒಳ್ಳೆಯ ತೀರ್ಮಾನಗಳು.
ಗುರುವಾರ ಬೆಳಗ್ಗೆ ಈ ಬಗ್ಗೆ ಖುದ್ದು ಸಿಎಂ ಅವರೇ ಹೇಳಿದರು. ಖುಷಿಯಾಯಿತು. ಬಡವರು, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಕಲ್ಯಾಣದ ಬಗ್ಗೆ ಕಾಂಗ್ರೆಸಿಗರು ಬರೀ ಮಾತನಾಡುತ್ತಾರೆ. ಸಿಎಂ ಅವರು ಅಕ್ಷರಶಃ ಕಲ್ಯಾಣ ಕಾರ್ಯಗಳನ್ನು ಜಾರಿಗೆ ತಂದಿದ್ದಾರೆ. ಹಣಕಾಸಿನ ಇತಿಮಿತಿಯಲ್ಲಿ ಒಳ್ಳೆಯ ತೀರ್ಮಾನ ಮಾಡಿದ್ದಾರೆ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.