ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ವರ್ಷ: ಹಲವು ಯೋಜನೆಗಳಿಗೆ ಪ್ರಧಾನಿ ಚಾಲನೆ ರಾಷ್ಟ್ರ ನಿರ್ಮಾಣಕ್ಕೆ ಎನ್‍ಇಪಿ ಮಹಾ ಅಸ್ತ್ರ

ಹೊಸದಿಲ್ಲಿ : ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ)ಎಂಬುದು ರಾಷ್ಟ್ರನಿರ್ಮಾಣದ ಮಹಾಯಜ್ಞಕ್ಕೆ ಪ್ರಮುಖ ಅಸ್ತ್ರವಾಗಿ ಕಾರ್ಯನಿರ್ವಹಿಸಲಿದ್ದು, ದೇಶದ ಯುವಜನತೆಯ ಆಸೆ ಆಕಾಂಕ್ಷೆಗಳನ್ನು ದೇಶ ಪೂರೈಸುತ್ತದೆ ಎಂಬ ಭರವಸೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಎನ್‍ಇಪಿ -2020 ಜಾರಿಯಾದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಹಲವು ಶಿಕ್ಷಣ ಯೋಜನೆಗಳಿಗೆ ಚಾಲನೆ ನೀಡಿ ಮೋದಿ ಮಾತನಾಡಿದ್ದಾರೆ. ರಾಷ್ಟ್ರ ನಿರ್ಮಾಣ ಎಂಬುದು ಒಂದು ದೊಡ್ಡ ಮಹಾಯಜ್ಞವಾಗಿದ್ದು, ಈ ಯಜ್ಞನದಲ್ಲಿ ಎನ್‍ಇಪಿ ಪ್ರಮುಖ ಅಂಶವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ
ಜತೆಗೆ ಇದಕ್ಕಾಗಿ ಕಳೆದ ಒಂದು ವರ್ಷದಲ್ಲಿ ದೇಶದ ಶಿಕ್ಷಕರು, ಪ್ರಾಂಶುಪಾಲರು, ನೀತಿ ನಿರೂಪಕರು ಬಹಳ ಶ್ರಮಿಸಿದ್ದಾರೆ ಅವರೆಲ್ಲರ ಶ್ರಮದ ಫಲವಾಗಿ ಎನ್‍ಇಪಿ ಒಂದು ಮಹತ್ವದ ಯೋಜನೆಯಾಗಿ ಹೊರಹೊಮ್ಮಿದೆ ಎಂದು ಶ್ಲಾಘಿಸಿದ್ದಾರೆ.

ಯುವಜನರು ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ದೇಶ ಬಿಟ್ಟು ಹೋಗಬೇಕಿಲ್ಲ, ದೇಶದಲ್ಲಿಯೇ ಉತ್ತಮ ಶಿಕ್ಷಣ ವ್ಯವಸ್ಥೆ ದೊರೆಯುತ್ತಿದೆ.

ಭಾರತೀಯ ವಿದ್ಯಾರ್ಥಿಗಳು ಮಾತ್ರವಲ್ಲ ವಿದೇಶಿಗರನ್ನು ಭಾರತೀಯ ಶಿಕ್ಷಣ ಆಕರ್ಷಿಸುತ್ತಿದ್ದು, ಹೊಸ ಸಂಶೋಧನೆಗಳಿಗಾಗಿ ಇನ್ನು ವಿದೇಶಿಗರೇ ಭಾರತಕ್ಕೆ ಆಗಮಿಸುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.

ಎಬಿಸಿ ಯೋಜನೆಗೆ ಚಾಲನೆ
ಹಣಕಾಸಿನ ವ್ಯವಹಾರಗಳಿಗಾಗಿ ವಾಣಿಜ್ಯ ಬ್ಯಾಂಕುಗಳು ಕಾರ್ಯನಿರ್ವಹಿಸುವಂತೆಯೇ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪದವಿಗಾಗಿ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ಎಬಿಸಿ)ಯೋಜನೆ ಕಾರ್ಯನಿರ್ವಹಿಸಲಿದೆ. ಯಾವುದೇ ಒಬ್ಬ ವಿದ್ಯಾರ್ಥಿ ಮೊದಲು ಒಂದು ಕೋರ್ಸ್ ತೆಗೆದುಕೊಂಡು ಅದರಲ್ಲಿ ಒಂದು ವರ್ಷ ಮುಂದುವರಿದು ಬಳಿಕ ಮತ್ತೊಂದು ವರ್ಷದಲ್ಲಿ ಬೇರೆ ಕೋರ್ಸ್ ವ್ಯಾಸಂಗ ಮಾಡಲು ಇಚ್ಛಿಸಿದರೆ ಅದನ್ನು ಎಬಿಸಿ ಅನ್ವಯ ಮಾಡಬಹುದಾಗಿದೆ. ಅಂದರೆ ಈ ಯೋಜನೆ ವಿದ್ಯಾರ್ಥಿಗಳಿಗೆ ಬಹು ಪ್ರವೇಶ, ಬಹು ನಿರ್ಗಮದ ಆಯ್ಕೆ ನೀಡುತ್ತದೆ.

ಜತೆಗೆ ಶೈಕ್ಷಣಿಕ ಕ್ರೆಡಿಟ್ ಬ್ಯಾಂಕ್ ವಿದ್ಯಾರ್ಥಿಗಳ ತರಗತಿ, ಟುಟೋರಿಯಲ್ಸ್ ಗಳ ಆಧಾರದ ಮೇಲೆ ಶೈಕ್ಷಣಿಕ ದಾಖಲೆ ಸಂಗ್ರಹಿಸುತ್ತದೆ. ಈ ದತ್ತಾಂಶಗಳ ಆಧಾರದ ಮೇಲೆ ವಿದ್ಯಾರ್ಥಿಗಳು ತಮ್ಮ ಪದವಿಯನ್ನು ತಮ್ಮ ಇಷ್ಟದ ವಿಷಯಗಳಲ್ಲಿ ಹೊಂದಬಹುದಾಗಿದೆ.

11 ಪ್ರಾದೇಶಿಕ ಭಾಷೆಯಲ್ಲಿ ಇಂಜಿನಿಯರಿಂಗ್
ಮಾತೃಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವುದನ್ನು ಎನ್‍ಇಪಿ ಉತ್ತೇಜಿಸಿದ್ದು, ಈಗ ಇಂಜಿನಿಯರಿಂಗ್ ಕೋರ್ಸ್‍ಗಳು ಕೂಡ 5 ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಾಗಲಿದೆ. 8 ರಾಜ್ಯಗಳ 14 ಎಂಜಿನಿಯರಿಂಗ್ ಕಾಲೇಜುಗಳು ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಬಂಗಾಳಿ ಭಾಷೆಯಲ್ಲಿ ಕೋರ್ಸ್‍ಗಳನ್ನು ಪ್ರಾರಂಭಿಸುತ್ತಿದೆ. ಜತೆಗೆ 11 ಭಾರತೀಯ ಭಾಷೆಗಳಿಗೆ ಇಂಜಿನಿಯರಿಂಗ್ ಕೋರ್ಸ್ ಅನುವಾದಿಸುವ ಸಾಧನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದಿದ್ದಾರೆ.

ಸಂಕೇತ ಭಾಷೆಗೆ ಸ್ಥಾನಮಾನ
ಭಾರತೀಯ ಸಂಕೇತ ಭಾಷೆ ಮೊದಲ ಬಾರಿಗೆ ಭಾಷಾ ಸ್ಥಾನಮಾನವನ್ನು ಪಡೆದಿದ್ದು, ವಿದ್ಯಾರ್ಥಿಗಳು ಇನ್ನುಮುಂದೆ ಇದನ್ನು ಭಾಷೆಯಾಗಿಯೂ ಅಧ್ಯಯನ ಮಾಡಬಹುದು. ಇದರಿಂದ ದಿವ್ಯಾಂಗರ ಶಿಕ್ಷಣಕ್ಕೆ ನರವಾಗುತ್ತದೆ ಎಂದು ಹೇಳಿದ್ದಾರೆ.

ವಿದ್ಯಾಪ್ರವೇಶ
ಗ್ರಾಮೀಣ ಭಾಗದ ಮಕ್ಕಳಿಗೂ ವಿದ್ಯಾಭ್ಯಾಸದ ಎಲ್ಲ ಸೌಕರ್ಯ ಒದಗಿಸಿಕೊಡುವ ನಿಟ್ಟಿನಲ್ಲಿ 1ನೇ ತರಗತಿ ಮಕ್ಕಳಿಗೆ 3 ತಿಂಗಳ ನಾಟಕ ಆಧಾರಿತ ಶಾಲಾ ಮಾದರಿಯ ವಿದ್ಯಾಪ್ರವೇಶ ಯೋಜನೆಗೂ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಜತೆಗೆ 3, 5 ಮತ್ತು 8 ನೇ ತರಗತಿಗಳಲ್ಲಿ ಸಾಮಥ್ರ್ಯ ಆಧಾರಿತ ಮೌಲ್ಯಮಾಪನ ಚೌಕಟ್ಟು ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಗಾಗಿ ಮೀಸಲಾದ ವೆಬ್ ಸೈಟನ್ನು ಮೋದಿ ಬಿಡುಗಡೆ ಮಾಡಿದ್ದಾರೆ.

ಕೇಂದ್ರ ಸರ್ಕಾರದಿಂದ ವೈದ್ಯಕೀಯ ಶಿಕ್ಷಣಕ್ಕೆ ಕ್ರಾಂತಿಕಾರಿ ಹೆಜ್ಜೆ ಪ್ರಸಕ್ತ ಶೈಕ್ಷಣಿಕ ವರ್ಷ 2021-22ರಿಂದ ಮಹತ್ವದ ಮೀಸಲಾತಿ
ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ಮಹತ್ವದ ಬದಲಾವಣೆ ತಂದಿರುವ ಕೇಂದ್ರ ಸರ್ಕಾರ ಇದೀಗ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮೀಸಲಾತಿ ಘೋಷಿಸಿದೆ. ಇದರಲ್ಲಿ ಪ್ರಮುಖವಾಗಿ ಇತರೆ ಹಿಂದುಳಿದ ವರ್ಗಕ್ಕೆ(ಒಬಿಸಿ) ಶೇ.27 ಹಾಗೂ ಆರ್ಥಿಕ ದುರ್ಬಲರಿಗೆ(ಇಡಬ್ಲ್ಯೂಎಸ್) ಶೇ.10 ಮೀಸಲಾತಿ ನೀಡಲಾಗಿದೆ.

ಪ್ರಸಕ್ತ ಶೈಕ್ಷಣಿಗೆ ವರ್ಷ 2021-22ರಿಂದ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ, ದಂತ ಕೋರ್ಸ್‍ಗಳಿಗೆ(ಎಂಬಿಬಿಎಸ್, ಎಂಡಿ, ಎಂಎಸ್, ಡಿಪೆÇ್ಲಮಾ, ಬಿಡಿಎಸ್, ಎಂಡಿಎಸ್) ಈ ಮೀಸಲಾತಿ ಅನ್ವಯವಾಗಲಿದೆ.

ಕೇಂದ್ರದ ಈ ನಿರ್ಧಾರದಿಂದ ಪ್ರತಿ ವರ್ಷ ಎಂಬಿಬಿಎಸ್‍ನಲ್ಲಿ ಸುಮಾರು 1500 ಒಬಿಸಿ ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ಪದವಿಯಲ್ಲಿ 2500 ಒಬಿಸಿ ವಿದ್ಯಾರ್ಥಿಗಳಿಗೆ, ಸುಮಾರು 550 ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ಪದವೀಧರರಲ್ಲಿ ಸುಮಾರು 1000 ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ನೆರವಾಗಲಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ 1986ರಲ್ಲಿ ಅಖಿಲ ಭಾರತ ಕೋಟಾ(ಎಐಕ್ಯು) ಯೋಜನೆ ಜಾರಿಗೊಳಿಸಲಾಯಿತು. ಈ ಯೋಜನೆಯಲ್ಲಿ ಯಾವುದೇ ರಾಜ್ಯದ ವಿದ್ಯಾರ್ಥಿಗಳಿಗೆ ಬೇರೆ ರಾಜ್ಯದಲ್ಲಿರುವ ಉತ್ತಮ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಆಕಾಂಕ್ಷಿ ಮುಕ್ತ ಅರ್ಹತೆ ಆಧಾರಿತ ಅವಕಾಶಗಳನ್ನು ಒದಗಿಸುತ್ತದೆ. ಅಖಿಲ ಭಾರತ ಕೋಟಾ ಒಟ್ಟು ಯುಜಿ ಸೀಟುಗಳಲ್ಲಿ ಶೇ.15 ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಒಟ್ಟು ಪಿಜಿ ಸೀಟುಗಳಲ್ಲಿ ಶೇ.50 ಸೀಟುಗಳನ್ನು ಒಳಗೊಂಡಿದೆ.

1986 ರಿಂದ 2007ರ ವರೆಗೆ ಎಐಕ್ಯು ಕೋಟಾದಲ್ಲಿ ಯಾವುದೇ ಮೀಸಲಾತಿ ಇರಲಿಲ್ಲ. 2007ರಲ್ಲಿ ಸುಪ್ರೀಂ ಕೋರ್ಟ್, ಎಸ್‍ಸಿಗೆ ಶೇ.15 ಹಾಗೂ ಎಸ್‍ಟಿಗೆ ಶೇ.7.5 ಮೀಸಲಾತಿ ಪರಿಚಯಿಸಿತು. ಇದೀಗ ಮೀಸಲಾತಿಯನ್ನು ಒಬಿಸಿಗೆ ಶೇ.27 ಹಾಗೂ ಆರ್ಥಿಕ ದುರ್ಬಲರಿಗೆ ಶೇ.10 ಎಂದು ವಿಂಗಡಿಸಿ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.

ಕಳೆದ ಆರು ವರ್ಷಗಳಲ್ಲಿ, ದೇಶದ ಎಂಬಿಬಿಎಸ್ ಸೀಟುಗಳು ಶೇ.56 ರಷ್ಟು ಹೆಚ್ಚಾಗಿದೆ. 2014 ರಲ್ಲಿ 54,348 ಸೀಟುಗಳಿಂದ 2020 ರಲ್ಲಿ 84,649 ಸೀಟುಗಳಿಗೆ ಮತ್ತು ಪಿಜಿ ಸೀಟುಗಳ ಸಂಖ್ಯೆ 2014 ರಲ್ಲಿ 30,191 ಸೀಟ್‍ಗಳಿಂದ ಶೇ.80 ಹೆಚ್ಚಾಗಿದ್ದು, 2020ರಲ್ಲಿ 54,275 ಸೀಟ್‍ಗಳಿಗೆ ಏರಿಕೆಯಾಗಿತ್ತು.

ಅದೇ ಅವಯಲ್ಲಿ, 179 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಮತ್ತು ಈಗ ದೇಶದಲ್ಲಿ 558 ವೈದ್ಯಕೀಯ ಕಾಲೇಜುಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ