ಪೆಗಾಸಸ್ ಗೂಢಚರ್ಯೆ ಕುರಿತಂತೆ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪ ಆಧಾರರಹಿತ ಗುಲ್ಲಾಗಿದೆ. ವಿರೋಧಪಕ್ಷಗಳಿಗೆ ಜನರ ಮುಂದೆ ಒಯ್ಯಲು ಯಾವುದೇ ವಿಷಯವಿಲ್ಲದ್ದರಿಂದ ಅವರು ಈ ರೀತಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಜೆ.ಪಿ.ನಡ್ಡಾ ತರಾಟೆಗೆತ್ತಿಕೊಂಡರು. ಇಲ್ಲಿನ ಒಂದು ಮಾಧ್ಯಮ ಮತ್ತು ವಿದೇಶಗಳಲ್ಲಿನ ಕೆಲವು ಮಾಧ್ಯಮಗಳು ಕೇಂದ್ರದ ಇಬ್ಬರು ಸಚಿವರು ,40ಪತ್ರಕರ್ತರು, 3ವಿಪಕ್ಷ ನಾಯಕರು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಭಾರತೀಯ ಮೊಬೈಲ್ ನಂಬರ್ಗಳನ್ನು ಇಸ್ರೇಲ್ ಸಂಸ್ಥೆಯಾದ ಎನ್ಎಸ್ಒದ ಪೆಗಾಸಸ್ ಸ್ಪೈವೇರ್ ಮೂಲಕ ಹ್ಯಾಕ್ ಮಾಡಲಾಗಿದೆ ಎಂದು ವರದಿ ಮಾಡಲಾಗಿತ್ತು. ಸಂಸತ್ ಅವೇಶನದ ಮುನ್ನಾದಿನ ಇಂತಹ ವರದಿಗಳು ಪ್ರಕಟವಾಗಿದ್ದವು. ಇದರ ಬೆನ್ನಿಗೇ ವಿಪಕ್ಷಗಳು ಗುಲ್ಲೆಬ್ಬಿಸಿವೆ. ಆದರೆ ಸರಕಾರ ಇದನ್ನು ನಿರಾಕರಿಸಿದೆ.
ಸಂಸತ್ತಿನಲ್ಲಿ ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಕಲಾಪಕ್ಕೆ ಅಡ್ಡಿ ಉಂಟು ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ನಡ್ಡಾ, ನಾವು ಎಲ್ಲ ರೀತಿಯ ಚರ್ಚೆಗಳಿಗೂ ಸಿದ್ಧರಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ಆದರೆ ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ವಿಷಯಗಳಿಲ್ಲದೆ ಹತಾಶೆಯಿಂದ ಈ ರೀತಿ ಕಲಾಪಕ್ಕೆ ಅಡ್ಡಿ ಉಂಟು ಮಾಡುವ ತಂತ್ರಗಳಿಗೆ ಮೊರೆಹೋಗಿವೆ…ಅವರು ಏನು ಮಾಡುತ್ತಿದ್ದಾರೆ ಎಂಬುದು ಅವರಿಗೇ ಗೊತ್ತಿಲ್ಲ. ಅವರು ವಿಷಯವಲ್ಲದ ಕಾರಣಕ್ಕೆ ಸಂಸತ್ತಿನ ಕಲಾಪಕ್ಕೆ ಅಡ್ಡಿ ಒಡ್ಡಲು ಬಯಸುತ್ತಿದ್ದಾರೆ ಎಂದರು.
ವಿಪಕ್ಷಗಳ ಈ ಎಲ್ಲ ತಂತ್ರಗಳ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮರ್ಥ ನಾಯಕತ್ವದಡಿ ಲೋಕಸಭೆ ಮತ್ತು ರಾಜ್ಯಸಭೆ ಸೇರಿದಂತೆ ಸಂಸತ್ತಿನ ಉತ್ಪಾದಕತೆಯು ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಸಾಧನೆ ಮಾಡಿದೆ ಎಂದು ಅವರು ಹೇಳಿದರು.ಕಾಂಗ್ರೆಸ್ ಚುಕ್ಕಾಣಿ ಇಲ್ಲದ ದೋಣಿಯಂತಾಗಿದೆ ಎಂದರು.
ಎರಡು ದಿನಗಳ ಗೋವಾ ಭೇಟಿಯ ಮುಕ್ತಾಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು , ಗೋವಾ ಚುನಾವಣೆಯಲ್ಲಿ ಬಿಜೆಪಿಯು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನಾಯಕತ್ವದಲ್ಲಿ ನಡೆಯಲಿದ್ದು, ಬಿಜೆಪಿ ಮತ್ತೆ ಜನಾಶೀರ್ವಾದದೊಂದಿಗೆ ಅಕಾರಕ್ಕೆ ಬರಲಿದೆ . ಆದರೆ ಈ ಬಗ್ಗೆ ಅಕೃತ ನಿರ್ಧಾರವನ್ನು ಪಕ್ಷದ ಸಂಸದೀಯ ಮಂಡಳಿ ಕೈಗೊಳ್ಳಲಿದೆ ಎಂದರು.