ಬೆಂಗಳೂರು, ಜು.26- ಒಬ್ಬ ಭ್ರಷ್ಟ ಮುಖ್ಯಮಂತ್ರಿಯನ್ನು ತೆಗೆದು ಇನ್ನೊಬ್ಬ ಭ್ರಷ್ಟನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಸಾಮಾನ್ಯ ಜನರಿಗೆ ಏನೂ ಲಾಭವಾಗುವುದಿಲ್ಲ. ಅದರ ಬದಲು ಅಧಿಕಾರ ನಡೆಸಲು ಸಂಪೂರ್ಣ ವಿಫಲವಾಗಿರುವ ಬಿಜೆಪಿ ಪಕ್ಷವೇ ಅಧಿಕಾರ ಬಿಟ್ಟು ತೊಲಗಿದರೆ ರಾಜ್ಯದ ಜನ ನೆಮ್ಮದಿಯಿಂದ ಬದುಕಬಹುದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಭ್ರಷ್ಟರ ಪಕ್ಷವಾಗಿದೆ. ಸಚಿವೆ ಶಶಿಕಲಾ ಜೊಲ್ಲೆ ಲಂಚ ಪಡೆದಿದ್ದನ್ನು ಬಿಜೆಪಿ ನಾಯಕರು ಸಾಧನೆಯನ್ನಾಗಿ ಪರಿಗಣಿಸಿದಂತಿದೆ. ದಾಖಲೆ ಸಹಿತ ಸಿಕ್ಕಿ ಬಿದ್ದಿರುವ ಭ್ರಷ್ಟ ಮಂತ್ರಿಯನ್ನು ಇನ್ನು ಸಂಪುಟದಲ್ಲಿ ಇಟ್ಟುಕೊಂಡು ಬಿಜೆಪಿ ಸುಮ್ಮನೆ ಕುಳಿತಿದೆ ಎಂದು ಕಿಡಿಕಾರಿದ್ದಾರೆ.
ಪ್ರವಾಹದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ನಾಶವಾಗಿದೆ. 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜಾನುವಾರುಗಳು ಸಾವಿಗೀಡಾಗಿವೆ. ಜನರ ಕಷ್ಟ ಅರಿತು ಅವರ ನೆರವಿಗೆ ದಾವಿಸಬೇಕಿದ್ದ ಬಿಜೆಪಿ ನಾಯಕರು ಮುಖ್ಯಮಂತ್ರಿ ಬದಲಾವಣೆ, ಮಂತ್ರಿ ಪದವಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆ ಮಾತಿನಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಯಡಿಯೂರಪ್ಪ ಅವರೇ ಉತ್ತಮ ಮುಖ್ಯಮಂತ್ರಿಯಾಗಿ ಕಂಡಿದ್ದರು. ಸ್ವತಃ ಬಿಜೆಪಿ ಶಾಸಕರೇ ಯಡಿಯೂರಪ್ಪ ಅವರ ಕುಟುಂಬ ಸರ್ಕಾರದ ಖಜಾನೆಯನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದರು. ಭ್ರಷ್ಟಾಚಾರಕ್ಕೆ ಇದಕ್ಕಿಂತಲೂ ಬೇರೆ ಸಾಕ್ಷಿ ಬೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.