ಮೇಕೆದಾಟಿಗೆ ಆಕ್ಷೇಪ ಬೇಡ: ಎಂ.ಬಿ. ಪಾಟೀಲ

ವಿಜಯಪುರ: ಮೇಕೆದಾಟು ಯೋಜನೆಯಲ್ಲಿ ನಮ್ಮ ನೀರನ್ನು ನಾವು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಇದರಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂದು ಮಾಜಿ ನೀರಾವರಿ ಸಚಿವ ಎಂ.ಬಿ. ಪಾಟೀಲ ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ನಮ್ಮ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ತಮಿಳುನಾಡು ಇದಕ್ಕೆ ಆಕ್ಷೇಪ ಎತ್ತಬಾರದು.

ಈ ಯೋಜನೆ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಸಹಾಯಕವಾಗಲಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದು ಅಭಿಪ್ರಾಯ ಪಡೆದುಕೊಂಡು, ನಂತರ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.

ಮೇಕದಾಟು, ಸಿಂಗಟಾಲೂರು, ವಿಶ್ವ ಬ್ಯಾಂಕ್ ಜಲಾಶಯಗಳ ಪುನರುಜ್ಜೀವನಕ್ಕೆ ಕರ್ನಾಟಕದ ಜಲಾಶಯಗಳ ಸೇರ್ಪಡೆ, ಕಾವೇರಿ ಕೊಳ್ಳದಲ್ಲಿ 65 ಕೆರೆಗಳ ಭರ್ತಿ ಹೀಗೆ ನೀರಾವರಿ ವಲಯದಲ್ಲಿ ನಾನು ಮಾಡಿದ ಸಾಧನೆಗಳ ಪಟ್ಟಿ ದೊಡ್ಡದಿದೆ. ನನಗೆ ಮಾತನಾಡಲು ಸಾಕಷ್ಟು ವಿಷಯಗಳಿವೆ, ಹೀಗಾಗಿ ಸಣ್ಣ ವಿಷಯವನ್ನಿಟ್ಟುಕೊಂಡು ಪ್ರಚಾರ ಪಡೆದುಕೊಳ್ಳುವ ಅವಶ್ಯಕತೆ ನನಗಿಲ್ಲ. ನಾನು ಮಾಜಿ ಗೃಹ ಸಚಿವ, ಜಲಸಂಪನ್ಮೂಲ ಸಚಿವ, ಹೀಗಾಗಿ ಮತಕ್ಷೇತ್ರದ ಸೀಮೆ ನನಗಿಲ್ಲ ಎಂದರು.

ಜನತೆಯ ಆಶೀರ್ವಾದ ಬಲ, ನಮ್ಮ ಸರ್ಕಾರದ ಅವಯಲ್ಲಿ ಮುಖ್ಯಮಂತ್ರಿಗಳು ನೀಡಿದ ಸಹಕಾರದ ಫಲವಾಗಿ ನೀರಾವರಿ ಕ್ಷೇತ್ರದಲ್ಲಿ ದೊಡ್ಡ ಯೋಜನೆಗಳಿಗೆ ಒಂದು ಹಂತಕ್ಕೆ ತಲುಪಿಸುವುದು ಸಾಧ್ಯವಾಯಿತು. ಈ ಎಲ್ಲ ವಿಷಯಗಳನ್ನಿಟ್ಟುಕೊಂಡು ಪ್ರಚಾರ ಪಡೆಯಬಹುದು, ಜನತೆಯ ಅನುಕೂಲಕ್ಕಾಗಿ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ಇಂಡಿ ಭಾಗದ 16 ಕೆರೆಗಳನ್ನು ತುಂಬುವುದು ನನ್ನ ಕನಸಿನ ಯೋಜನೆ, ನನ್ನ ಪರಿಕಲ್ಪನೆಯಲ್ಲಿ ಮೂಡಿದ್ದು, ಇದಕ್ಕಾಗಿ ಹಣಕಾಸಿನ ಅಲಭ್ಯತೆ ಇದ್ದ ಸಂದರ್ಭದಲ್ಲಿ ಕಳೆದ ವರ್ಷವೂ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸುತ್ತಲೇ ಇದೆ, ಮೊನ್ನೆ ಮುಖ್ಯಮಂತ್ರಿಗಳನ್ನು ಭೇಟಿ ಈ ಬಗ್ಗೆ ಗಮನ ಸೆಳೆದಿದ್ದೆ. ಹಳ್ಳ-ಕೊಳ್ಳ ತುಂಬುವ ಯೋಜನೆಗೆ 65 ಕೋಟಿ ರೂ. ಹಾಗೂ ಈ ಇಂಡಿ ಭಾಗದ ಕೆರೆಗಳನ್ನು ತುಂಬುವ ಯೋಜನೆಗೆ ಅನುಮೋದನೆ ನೀಡುವಂತೆ ಕೋರಿಕೊಂಡಿದ್ದೆ, ಮುಖ್ಯಮಂತ್ರಿಗಳು ಕೊರೋನಾ ಹಿನ್ನೆಲೆಯಲ್ಲಿ ಈ ಎರಡು ಯೋಜನೆಗಳಲ್ಲಿ ಒಂದನ್ನು ಮಾತ್ರ ಅಯ್ಕೆ ಮಾಡಿಕೊಳ್ಳಿ ಎಂದಾಗ ಇಂಡಿ ಭಾಗದ ಕೆರೆಗಳ ತುಂಬುವುದಕ್ಕೆ ಆದ್ಯತೆ ನೀಡುವಂತೆ ಕೋರಿಕೊಂಡೆ, ಅದರನ್ವಯ ಅನುಮೋದನೆ ದೊರಕಿತು ಎಂದರು.

ಇದು ಒಂದೇ ಅಥವಾ ಎರಡೇ ದಿನಗಳಲ್ಲಿ ಆಗಿರುವ ಯೋಜನೆಯಲ್ಲ, ಇದರ ಬಗ್ಗೆ ನಾನು ಹಲವಾರು ಬಾರಿ ಗಮನ ಸೆಳೆದಿದ್ದೇನೆ, ನನ್ನ ಪರಿಕಲ್ಪನೆಯಲ್ಲಿ ಮೂಡಿಬಂದ ಯೋಜನೆ ಅನುಮೋದನೆ ದೊರಕಿದಾಗ ಅದರ ಸಂತಸ ಹಂಚಿಕೊಂಡಿದ್ದೂ ತಪ್ಪೇ ? ರೇವಣಸಿದ್ದೇಶ್ವರ ಯೋಜನೆ ಒಂದು ಬೃಹತ್ ಯೋಜನೆಯಾಗಿದೆ. ನಾನು ಜಲಸಂಪನ್ಮೂಲ ಸಚಿವನಾಗಿದ್ದೇ ಆದ್ದಲ್ಲಿ ಆ ಯೋಜನೆಯನ್ನು ಪೂರ್ಣ ಮಾಡುತ್ತಿದ್ದೆ, ಆದರೆ 2400 ಕೋಟಿ ರೂ. ಬೃಹತ್ ಮೊತ್ತದ ಯೋಜನೆಯಾಗಿದ್ದು, ನಮ್ಮ ಸರ್ಕಾರವಿಲ್ಲ, ವಿರೋಧ ಪಕ್ಷದಲ್ಲಿ ನಾವಿದ್ದೇವೆ, ಆದರೂ ಆ ಯೋಜನೆ ಅನುಷ್ಠಾನಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ