ಹೈದರಾಬಾದ್: ಕೊರೋನಾ ಎರಡನೇ ಅಲೆಯ ತೀವ್ರತೆ ತಗುತ್ತಿದ್ದು, ಈಗ ಮೂರನೇ ಅಲೆ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ, ಈ ಮೂರನೇ ಅಲೆಗೆ ಜುಲೈ 4ರಂದೇ ಮುಹೂರ್ತ ಇಟ್ಟಾಗಿದೆ ಎಂಬುದಾಗಿ ಹೈದರಾಬಾದ್ನ ಖ್ಯಾತ ಸಂಶೋಧಕರೊಬ್ಬರು ಹೇಳಿದ್ದಾರೆ.
ಹೈದರಾಬಾದ್ನ ಖ್ಯಾತ ಭೌತ ವಿಜ್ಞಾನಿ ಹಾಗೂ ಹೈದರಾಬಾದ್ ವಿಶ್ವವಿದ್ಯಾಲಯ(ಯುಒಎಚ್)ದ ಮಾಜಿ ಪ್ರೊ ವೈಸ್ ಚಾನ್ಸಲರ್ ಆಗಿರುವ ಡಾ.ವಿಪಿನ್ ಶ್ರೀವಾಸ್ತವ ಅವರು , ಜು.4ರಿಂದ ದೇಶದಲ್ಲಿ ಕೋವಿಡ್ -19ರ ಸೋಂಕುಗಳು ಮತ್ತು ಕಳೆದ 15ತಿಂಗಳ ಸಾವಿನ ಪ್ರಮಾಣವನ್ನು ಅಧ್ಯಯನ ನಡೆಸಿ ಈ ಎಚ್ಚರಿಕೆ ನೀಡಿದ್ದಾರೆ. ಜು.4ರಿಂದ ದೇಶದಲ್ಲಿ ಸೋಂಕು ಮತ್ತು ಮರಣದ ಪ್ರಮಾಣವು ಎರಡನೇ ಅಲೆಯ ಆರಂಭದಲ್ಲಿ ಅಂದರೆ ಫೆಬ್ರವರಿಯ ಪ್ರಥಮ ವಾರದಲ್ಲಿ ಹೇಗಿತ್ತೋ ಅದೇ ರೀತಿ ಇದೆ ಎಂಬುದರತ್ತ ಅವರು ಬೊಟ್ಟು ಮಾಡಿದ್ದಾರೆ. ಎರಡನೇ ಅಲೆ ಏಪ್ರಿಲ್ ಅಂತ್ಯದ ವೇಳೆ ತಾರಕಕ್ಕೇರಿತ್ತು.
ನಿರ್ಲಕ್ಷ್ಯ ತಾಳಿದರೆ ಕಾದಿದೆ ಗಂಡಾಂತರ !
ಒಂದು ವೇಳೆ ಜನರು ನಿರ್ಲಕ್ಷ್ಯ ತಾಳಿದಲ್ಲಿ, ಮಾಸ್ಕ್ , ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ವಚ್ಛತೆ ಮತ್ತು ಲಸಿಕೆ ವಿಷಯದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡದ್ದೇ ಆದರೆ ಭಾರೀ ದೊಡ್ಡ ಗಂಡಾಂತರ ಕಾದಿದೆ. ಇದರಿಂದ ಮೂರನೇ ಅಲೆ ಭಾರೀ ಅನಾಹುತವನ್ನೇ ಸೃಷ್ಟಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ. ಅವರು ಕೊರೋನಾ ಆರಂಭವಾದಂದಿನಿಂದಲೂ ಕೋವಿಡ್ -19ಗ್ರಾಫಿಕ್ನ್ನು ಸಿದ್ಧಗೊಳಿಸಿ ಅದರ ಅಧ್ಯಯನ ನಡೆಸುತ್ತಿದ್ದಾರೆ.
ಇದರಂತೆ ಆರಂಭದ ಅಲೆಯಲ್ಲಿ 2020ರ ಮಾರ್ಚ್ನಲ್ಲಿ ಆರಂಭಗೊಂಡು ಏಪ್ರಿಲ್, ಮೇ, ಜೂನ್ನಲ್ಲಿ ಹಾಗೇ ಮುಂದುವರಿದು ಜುಲೈಯಿಂದ ಒಮ್ಮೆಲೇ ಏರುಮುಖಗೊಂಡು ಅಕ್ಟೋಬರ್ , ನವೆಂಬರ್ ಸಮಯದಲ್ಲಿ ಗರಿಷ್ಠ ಹಾನಿಯುಂಟು ಮಾಡಿತ್ತು. ಅನಂತರ ತಗ್ಗಿದ್ದು, 2021ರ ಫೆಬ್ರವರಿಯಲ್ಲಿ ಮತ್ತೆ ಸೋಂಕು ಪ್ರಕರಣಗಳು ಕಂಡುಬರಲಾರಂಭಿಸಿತ್ತು. ಇದು ಏಪ್ರಿಲ್ ವೇಳೆಗೆ ತಾರಕಕ್ಕೇರಿ ಭಾರೀ ಹಾನಿಯುಂಟು ಮಾಡಿತ್ತು.ಹೀಗೆ ಕಳೆದ 461ದಿನಗಳಲ್ಲಿ ಕೊರೋನಾ ಅಲೆ ಸಾಗಿ ಬಂದ ರೀತಿಯನ್ನು ಅವರು ವಿಶ್ಲೇಷಿಸಿದ್ದಾರೆ.
ಡಾ.ಶ್ರೀವಾಸ್ತವ್ ಅವರು ಮೂರು ಮಾನದಂಡಗಳನ್ನು ಆಧರಿಸಿ ಕೋವಿಡ್ ಪಿಡುಗನ್ನು ಅಧ್ಯಯನ ನಡೆಸಿದ್ದಾರೆ. ಇದನ್ನು “ದಿನವಹಿ ಸಾವಿನ ಪ್ರಮಾಣ” (ಡಿಡಿಎಲ್), ಎಂದು ಹೆಸರಿಸಿದ್ದು, ಇದರ ಆಧಾರದ ಮೇಲೆ ಜು.4ರಿಂದ ಮೂರನೇ ಅಲೆ ಆರಂಭವಾಗಿರುವುದಾಗಿ ಹೇಳಿದ್ದಾರೆ. ಹಾಗೆಯೇ ಇದರಂತೆ, ಹೊಸ ಅಲೆಯಲ್ಲಿ ಒಂದನೇ ದಿನದಿಂದ ಹೊಸ ಸೇರ್ಪಡೆ ಪ್ರಕರಣ ಆರಂಭದೊಂದಿಗೆ ಗುರುತಿಸಲಾಗಿದೆ. ಈ ಸಾವಿನ ಪ್ರಮಾಣವನ್ನು ಹೊಸ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 24ಗಂಟೆಗಳ ಅದೇ ಅವಯಲ್ಲಿನ ಸಂಖ್ಯೆಯನ್ನು ಆಧರಿಸಿ ವಿಶ್ಲೇಷಣೆ ನಡೆಸಲಾಗುತ್ತದೆ.