ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನಕ್ಕೂ ಬರುವುದಿಲ್ಲ. ಮುಖ್ಯಮಂತ್ರಿ ಪದವಿ ಎನ್ನುವುದು ಕನಸು. ಆದರೂ ಕೂಡ ಈಗಲೇ ಕಾಂಗ್ರೆಸ್ನಲ್ಲಿ ಐದು ಜಾತಿಗೆ ಐವರು ಸ್ವಯಂಘೋಷಿತ ಮುಖ್ಯಮಂತ್ರಿಗಳಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಶುಕ್ರವಾರ ಮೈಸೂರಿನ ಚಾಮರಾಜಪುರಂನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆ ಚುನಾವಣೆಗೆ ಇನ್ನು ಎರಡು ವರ್ಷ ಇದೆ. ಇನ್ನೂ ಚುನಾವಣೆ ಘೋಷಣೆಯೇ ಆಗಿಲ್ಲ, ಆದರೂ ಕಾಂಗ್ರೆಸ್ನಲ್ಲಿ ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ.
ಮಹಾಭಾರತದಲ್ಲಿ ಶ್ರೀಕೃಷ್ಣ ಆದರ್ಶ. ಆದರೆ, ಕಾಂಗ್ರೆಸ್ನಲ್ಲಿ ಪಂಚ ಪಾಂಡವರು. ಐದು ಜಾತಿಗೆ ಒಬ್ಬೊಬ್ಬ ಮುಖ್ಯಮಂತ್ರಿ. ಅವರು ಸ್ವಯಂಘೋಷಿತ ಮುಖ್ಯಮಂತ್ರಿಗಳು. ಚುನಾವಣೆ ನಂತರ ಅವರನ್ನು ಹುಡುಕಬೇಕಾಗುತ್ತದೆ ಎಂದು ಲೇವಡಿ ಮಾಡಿದರು.
ಮಾಜಿ ಉಪಮುಖ್ಯಮಂತ್ರಿ ಪರಮೇಶ್ಚರ್ ಅವರನ್ನು ಚುನಾವಣೆಯಲ್ಲಿ ನಾನು ಸೋಲಿಸಲಿಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಲಿ.
ಸಿದ್ದರಾಮಯ್ಯರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋಲಿಸಲಿಲ್ಲ ಅಂತ ಪರಮೇಶ್ವರ್ ಹೇಳಲಿ. ಆಗ ನಾನು ಇವರಿಬ್ಬರೂ ಹೇಳಿದಂತೆ ನಾನು ಕೇಳುತ್ತೇನೆ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಕಾಂಗ್ರೆಸ್ಗೆ ನಾನು ಸೊಸೆ ಎನ್ನುತ್ತಿದ್ದಾರೆ. ಸೊಸೆ ಕೈಗೆ ಕೀ ಕೊಟ್ಟರಲ್ಲ ಎನ್ನುತ್ತಾರೆ. ಕಾಂಗ್ರೆಸ್ಗೂ ಸೊಸೆ, ಬಾದಾಮಿಗೂ ಸೊಸೆ. ಆದರೆ ಯಾವ ಪಕ್ಷಕ್ಕೆ ಮಗ ನೀವು ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
17 ಜನರನ್ನು ಯಾವುದೇ ಕಾರಣಕ್ಕೂ ವಾಪಸ್ ಕರೆದುಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಅರ್ಜಿ ಹಾಕಿ ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದನ್ನು ಬಿಟ್ಟು ಬಂದಿರುವ 17 ಮಂದಿ, ಮತ್ತೆ ಆ ಕಡೆ ತಿರುಗಿಯೂ ನೋಡುವುದಿಲ್ಲ. ಯಾರಾದರೂ ಮತ್ತೆ ಆ ಪಕ್ಷಕ್ಕೆ ಹೋಗುತ್ತಾರಾ, ಕಾಂಗ್ರೆಸ್ನಲ್ಲಿ ಏಕತೆ ಇಲ್ಲ.
ಡಿ.ಕೆ.ಶಿವಕುಮಾರ್ ಅವರ ಪ್ರಚಾರ ವಾಹನದಲ್ಲಿ ಸಿದ್ದರಾಮಯ್ಯ ಅವರ ಫೋಟೊ ಕಿತ್ತು ಬಿಸಾಕಿದ್ದಾರೆ. ಅಷ್ಟು ಭಿನ್ನಮತ, ದ್ವೇಷದ ಹಗೆತನ ಅಲ್ಲಿ ತಾಂಡವವಾಡುತ್ತಿದೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮೂರ್ನಾಲ್ಕು ಜನರಷ್ಟೆ ಮಾತನಾಡುತ್ತಿದ್ದಾರೆ. ಅದನ್ನು ಬಿಟ್ಟು ಬೇರೆ ಯಾರು ಮಾತನಾಡುತ್ತಿಲ್ಲ. ಶಾಸಕ ಯತ್ನಾಳ್, ಯೋಗೇಶ್ವರ್, ರೇಣುಕಾಚಾರ್ಯ ಈ ಮೂವರಿಗೆ ಯಾವಾಗ ಬುದ್ಧಿ ಕಲಿಸಬೇಕು ಎಂಬುದು ಗೊತ್ತಿದೆ. ನಮ್ಮ ಪಕ್ಷದಲ್ಲಿ ಅಪ್ಪ-ಅಮ್ಮ ಇದ್ದಾರೆ. ಆದರೆ, ಕಾಂಗ್ರೆಸ್ನಲ್ಲಿ ಈ ರೀತಿ ಇಲ್ಲ, ಸ್ವಪಕ್ಷಕ್ಕೆ ಸಿದ್ದರಾಮಯ್ಯರೇ ವಿಲನ್. ಪಕ್ಷದೊಳಗೆ ಇದ್ದುಕೊಂಡು ಸಿದ್ದರಾಮಯ್ಯ ಆಟವಾಡುತ್ತಿದ್ದಾರೆ. ಇದೆ ಛಾಯೆ ಹೆಚ್.ವಿಶ್ವನಾಥ್ ಅವರಲ್ಲೂ ಉಳಿದುಕೊಂಡಿದೆ ಎಂದು ಕಾಲೆಳೆದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಲ್.ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷ ಮಂಗಳ ಸೋಮಶೇಖರ್, ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ರಾಜ್ಯ ವಕ್ತಾರ ಎಂ.ಜಿ.ಮಹೇಶ್, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.