ಹೊಸದಿಲ್ಲಿ: ಲಸಿಕೆ ವಿತರಿಸುವ ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮ, ದೇಶದ ಕೊರೋನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಸಾಂಕ್ರಾಮಿಕದ ಬಗ್ಗೆ ನಿಗಾ ಇರಿಸುವ ಡಿಜಿಟಲ್ ವೇದಿಕೆಯಾದ ಕೋ-ವಿನ್ (ಕೋವಿಡ್ ವ್ಯಾಕ್ಸಿನ್ ಇಂಟೆಲಿಜೆನ್ಸ್ ನೆಟ್ವರ್ಕ್) ಆ್ಯಪ್ಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ.
ಕೊರೋನಾ ಲಸಿಕಾ ಅಭಿಯಾನದ ಹಿನ್ನೆಲೆ ಪೊಲಿಯೋ ಲಸಿಕಾ ಕಾರ್ಯಕ್ರಮವನ್ನು ಮರು ನಿಗದಿ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಘೋಷಿಸಿದೆ. ಹೀಗಾಗಿ ಹಲವು ವರ್ಷಗಳಿಂದ ಪ್ರತಿ ಜನವರಿ 31ರಂದು ನಡೆಸಲಾಗುತ್ತಿದ್ದ ಪೊಲಿಯೋ ದಿನ ಇಲ್ಲವೆ ರಾಷ್ಟ್ರೀಯ ರೋಗನಿರೋಧಕ ದಿನವನ್ನು(ಎನ್ಐಡಿ) ಮುಂದೂಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಈ ವೇಳೆ ದೇಶಾದ್ಯಂತ ಆರೋಗ್ಯ ಕಾರ್ಯಕರ್ತರೊಂದಿಗೆ ಪ್ರಧಾನಿ ವಿಡಿಯೋ ಮೂಲಕ ಸಂವಹನ ನಡೆಸಲಿದ್ದಾರೆ.
ಮೊದಲ ದಿನ 3ಲಕ್ಷ ಕಾರ್ಯಕರ್ತರಿಗೆ ಲಸಿಕೆ
ಲಸಿಕಾ ಅಭಿಯಾನದ ಮೊದಲ ದಿನ ದೇಶಾದ್ಯಂತ 3,000ಕ್ಕೂ ಹೆಚ್ಚು ಕೇಂದ್ರಗಳಲ್ಲಿ 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುತ್ತದೆ.
ಕೇವಲ ವೈದ್ಯರು ಮತ್ತು ನರ್ಸ್ಗಳಷ್ಟೇ ಅಲ್ಲದೆ, ಸಫಾಯಿ ಕರ್ಮಚಾರಿಗಳು, ಆ್ಯಂಬುಲೆನ್ಸ್ ಚಾಲಕರು ಸೇರಿದಂತೆ ಇತರೆ ಮುಂಚೂಣಿ ಕಾರ್ಯಕರ್ತರು ಹಾಗೂ 50 ವರ್ಷ ಮೀರಿದವರಿಗೆ ಲಸಿಕೆಯನ್ನು ನೀಡಲಾಗುತ್ತದೆ. ಮೊದಲ ಹಂತದಲ್ಲಿ ಸುಮಾರು 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ , 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ, 50 ವರ್ಷ ಮೀರಿದವರಿಗೆ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 50 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಿಗೆ ನೀಡಲಾಗುವುದು.
1.65 ಕೋಟಿ ಡೋಸ್ಗಳಷ್ಟು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ. ಲಸಿಕೆ ಹಂಚಿಕೆಯಲ್ಲಿ ಯಾವುದೇ ರಾಜ್ಯಗಳ ನಡುವೆ ತಾರತಮ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಲಸಿಕೆ ಪ್ರಮಾಣಗಳ ಆರಂಭಿಕ ಪೂರೈಕೆಯಾಗಿದ್ದು, ಮುಂದಿನ ವಾರಗಳಲ್ಲಿ ನಿರಂತರವಾಗಿ ಪೂರೈಸಲಾಗುತ್ತದೆ. ಹೀಗಾಗಿ ಲಸಿಕೆ ಕೊರತೆ ಕುರಿತಂತೆ ಯಾವುದೇ ಬಗೆಯ ಆತಂಕ ವ್ಯಕ್ತಪಡಿಸುವುದು ಆಧಾರರಹಿತವಾಗಿದೆ ಎಂದು ಸಚಿವಾಲಯ ತಿಳಿಸಿದೆ.