ಹೊಸದಿಲ್ಲಿ :ಮೊನ್ನೆಮೊನ್ನೆಯವರೆಗೂ ಆಲಿಬಾಬಾ ಮತ್ತು ಅದರ ಸಹಸಂಸ್ಥೆಯಾದ ಆಂಟ್ ಗ್ರೂಪ್ ಮತ ಹಾಗೂ ಅದರ ಸಹಸಂಸ್ಥಾಪಕ ಜ್ಯಾಕ್ ಮಾ ಅವರನ್ನು ತನ್ನ ಹೆಮ್ಮೆ ಎಂದು ಬಿಂಬಿಸಿಕೊಳ್ಳುತ್ತಿದ್ದ ಕಮ್ಯುನಿಸ್ಟ್ ಚೀನಾ ಸರಕಾರ ಇದೀಗ ಅವರನ್ನು ತನಗೆ ಬೆದರಿಕೆಯಾಗಿ ಪರಿಗಣಿಸಿದೆ ಎಂಬ ವರದಿಗಳ ನಡುವೆಯೇ ಜ್ಯಾಕ್ ಮಾ ಅವರು ನಿಗೂಢವಾಗಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ .ಚೀನಾ ಸರಕಾರದ ನೀತಿಗಳನ್ನು ಟೀಕಿಸಿದ ಬಳಿಕ ಅವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಕಳೆದ ಎರಡು ತಿಂಗಳಿನಿಂದಲೂ ಜ್ಯಾಕ್ ಮಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದರಿಂದ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಊಹಾಪೊಹಗಳು ಹರಡಲಾರಂಭಿಸಿವೆ. ಚೀನಾದ ಆಲಿಬಾಬಾ ಮತ್ತು ಆಂಟ್ ಗ್ರೂಪ್ನ್ನು ಸ್ಥಾಪಿಸಿ ಉದ್ಯಮರಂಗದಲ್ಲಿ ಸಾಧನೆಯ ಉತ್ತುಂಗಕ್ಕೇರಿ ಜಗದ್ವಿಖ್ಯಾತಿ ಗಳಿಸಿದ ಜ್ಯಾಕ್ ಮಾ ಅವರನ್ನು , ಚೀನಾದ ಕ್ಸಿ ಜಿನ್ಪಿಂಗ್ ಆಡಳಿತವು ತನಗೆ ಬೆದರಿಕೆ ಎಂಬಂತೆ ಪರಿಗಣಿಸಿದ್ದು ಅವರನ್ನು ಕಾನೂನು ಬಲೆಗೆ ಸಿಲುಕಿಸಲು ಯತ್ನಿಸುತ್ತಿದೆ ಎಂಬುದಾಗಿ ವರದಿಯಾಗಿತ್ತು.ಕಳೆದ ಎರಡು ತಿಂಗಳ ಹಿಂದೆ ದೇಶ ಬಿಟ್ಟು ಹೋಗದಂತೆ ಅವರಿಗೆ ಚೀನೀ ಸರಕಾರ ತಾಕೀತು ಮಾಡಿತ್ತು.ಇದರೊಂದಿಗೆ ಜ್ಯಾಕ್ ಮಾ ಅವರನ್ನು ಚೀನಾ ಸರಕಾರ ಬಂಧನ ಅಥವಾ ದಿಗ್ಬಂಧನದಲ್ಲಿಟ್ಟಿದೆಯೇ ಎಂಬ ಅನುಮಾನಕ್ಕೂ ಕಾರಣವಾಗಿದೆ.
ಮಾ ಅವರು ತನ್ನದೇ ಆದ ಆಫ್ರಿಕಾಸ್ ಬಿಸಿನೆಸ್ ಹೀರೋಸ್ನ ಅಂತಿಮ ಎಪಿಸೋಡ್ನಲ್ಲಿ ನ್ಯಾಯಾೀಶನಾಗಿ ಕಾಣಿಸಿಕೊಳ್ಳಬೇಕಾಗಿದ್ದರೂ ಕಾಣಿಸಿಕೊಂಡಿರಲಿಲ್ಲ. ಇದರಿಂದ ಅವರ ಕುರಿತಂತೆ ನಿಗೂಢತೆ ಹರಡತೊಡಗಿದೆ.ತೀರಾ ಬಡತನದಿಂದ ಮೇಲೆ ಬಂದ ಮಾ ಅವರು ಉದ್ಯಮಸಾಹಸದಿಂದ ಜಗತ್ತಿನಾದ್ಯಂತ ಹೆಸರು ಮಾಡಿದ್ದರು. ಚೀನಾ ಆಡಳಿತಗಾರರ ನೀತಿಯನ್ನು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರು ಟೀಕಿಸಿದ್ದು, ಚೀನೀ ಸರಕಾರದ ಆರ್ಥಿಕ ನೀತಿ ಮತ್ತು ನಿಯಂತ್ರಣ ನೀತಿಗಳಿಂದಾಗಿ ಚೀನಾದಲ್ಲಿ ಸಂಶೋಧನಾ ಪ್ರವೃತ್ತಿಯೇ ಕುಂಠಿತಗೊಳ್ಳುತ್ತಿದೆ. ಸಣ್ಣ ಉದ್ಯಮಗಳು ಮತ್ತು ವ್ಯಕ್ತಿಗಳಿಗೆ ಹೆಚ್ಚಿನ ಆರ್ಥಿಕ ಸಹಕಾರದ ಅಗತ್ಯವಿರುವ ನೀತಿಗಳನ್ನು ಕೈಗೊಳ್ಳದ ಚೀನೀ ಸರಕಾರವನ್ನು ಅವರು ತರಾಟೆಗೆತ್ತಿಕೊಂಡಿದ್ದರು.ಆ ಬಳಿಕ ಅವರ ಆಲಿಬಾಬಾ ಉದ್ಯಮ ವಿರುದ್ಧ ಚೀನೀ ಕಮ್ಯುನಿಸ್ಟ್ ಸರಕಾರ ಕೆಂಗಣ್ಣು ಬೀರಲಾರಂಭಿಸಿತ್ತು.