ಬೆಂಗಳೂರು: ಬರುವ ಜ.1ರಿಂದ ಶಾಲೆ-ಕಾಲೇಜುಗಳನ್ನು ಆರಂಭಿಸುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯದ ಬದ್ಧತೆಯಿಂದಲೇ ಹೊರತು ನನ್ನ ವೈಯಕ್ತಿಕ ಪ್ರತಿಷ್ಠೆಗಾಗಿ ಅಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ಹೇಳಿದರು.
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾಗಮ ಹಾಗೂ ಶಾಲೆ-ಕಾಲೇಜು ಆರಂಭದ ಬಗ್ಗೆ ಕೆಲ ಮಾಧ್ಯಮಗಳು ನಕಾರಾತ್ಮಕವಾಗಿ ಬಿಂಬಿಸುತ್ತಿದ್ದು, ನನ್ನ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನಡುವೆ ಸಮನ್ವಯತೆ ಇಲ್ಲ ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳಿಗೆ ಇಷ್ಟವಿಲ್ಲದಿದ್ದರೂ ಶಾಲೆ ಆರಂಭಿಸಲು ಸುರೇಶಕುಮಾರ್ ಹಠ ಹಿಡಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ. ಶಾಲೆ ಶುರು ಮಾಡುವುದು ಸರ್ಕಾರಕ್ಕೆ ಪ್ರತಿಷ್ಠೆಯ ವಿಷಯವಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬದ್ಧತೆಯ ವಿಚಾರ. ತಾಂತ್ರಿಕ ಸಲಹಾ ಸಮಿತಿ ಮತ್ತು ಆರೋಗ್ಯ ಇಲಾಖೆ ಕೊಡುತ್ತಿರುವ ಮಾರ್ಗದರ್ಶಿ ಸೂತ್ರ ಅನುಸರಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲದಿರುವ ಸಂಗತಿಗಳನ್ನು ಮಾಧ್ಯಮಗಳು ಅನ್ವೇಷಣೆ ಮಾಡುವುದು ಬೇಡ.
ಆರೋಗ್ಯ, ಶಿಕ್ಷಣ ಸಮಾಜಕ್ಕೆ ಅತ್ಯಗತ್ಯ. ನಮ್ಮ ಸಮನ್ವಯ ಸಹ ಅತ್ಯುತ್ತಮವಾಗಿದೆ. ಸಿಎಂ ನೇತೃತ್ವದಲ್ಲಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಹಠ ಹಿಡಿದು ಮುಂದೆ ಹೋಗುತ್ತಿದ್ದೇನೆ ಎಂಬುದನ್ನು ತಲೆಯಲ್ಲಿ ಇಟ್ಟುಕೊಳ್ಳಬೇಡಿ. ಇದರಿಂದ ನನಗೆ ಏನೂ ಆಗಬೇಕಿಲ್ಲ ಎಂದರು.