ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡ ಮಾಡುವ 2020ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಪ್ರಸಂಗ ಕರ್ತೃಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ದರೇಮನೆ ನಿಟ್ಟೂರು ಗ್ರಾಮದ ಡಿ.ಎಸ್.ಶ್ರೀಧರ್ ಅವರನ್ನು ಆಯ್ಕೆ ಮಾಡಲಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿಯ ವಿವರ ನೀಡಿದ ಅಕಾಡೆಮಿ ಅಧ್ಯಕ್ಷ ಪೊ.ಎಂ.ಎ.ಹೆಗಡೆ ಅವರು, ಪ್ರಶಸ್ತಿ ಒಂದು ಲಕ್ಷ ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರವನ್ನು ಒಳಗೊಂಡಿದೆ ಎಂದರು.
ಐವರು ಸಾಧಕರಿಗೆ ಗೌರವ ಪ್ರಶಸ್ತಿ:
ಯಕ್ಷಗಾನ ಅಕಾಡೆಮಿ ಸರ್ಕಾರದ ನಿಯಮಾನುಸಾರ ಓರ್ವ ಗಣ್ಯರನ್ನು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಹಾಗೂ ಐದು ಮಂದಿ ಗಣ್ಯರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಹಾಗೂ 10 ಮಂದಿ ಗಣ್ಯರನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದರು.
`ಗೌರವ ಪ್ರಶಸ್ತಿ’ಗೆ ಉಡುಪಿ ಕುಂಜಿಬೆಟ್ಟು ಬಿ.ಸಂಜೀವ ಸುವರ್ಣ, ಮಂಗಳೂರು ತಲಕಳ ಕೊಳಂಬೆಯ ಕೆ.ತಿಮ್ಮಪ್ಪ ಗುಜರನ್, ಶಿರಸಿಯ ಡಾ.ವಿಜಯ ನಳಿನಿ ರಮೇಶ್, ಬೆಂಗಳೂರಿನ ಡಾ.ಚಕ್ಕರೆ ಶಿವಶಂಕರ್, ಹರಪನಹಳ್ಳಿಯ ಬಿ.ಪರಶುರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಪುರಸ್ಕಾರ ಒಳಗೊಂಡಿದೆ.
ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ:
`ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ’ಗೆ ಕುಂದಾಪುರದ ಗೋಪಾಲ ಆಚಾರ್ಯ ತೀರ್ಥಹಳ್ಳಿ ಹಾಗೂ ಬೇಲ್ತೂರು ರಮೇಶ್, ಉಡುಪಿಯ ಆವರ್ಸೆ ಶ್ರೀನಿವಾಸ ಮಡಿವಾಳ, ಮಂಗಳೂರಿನ ಹರಿನಾರಾಯಣ ಬೈಪಡಿತ್ತಾಯ ಹಾಗೂ ಸಂಜಯ್ ಕುಮಾರ್ ಶೆಟ್ಟಿ, ಶಿರಸಿಯ ಎಂ.ಆರ್.ಹೆಗಡೆ ಕಾನಗೋಡ, ಕುಂದಾಪುರದ ಸುಬ್ರಹ್ಮಣ್ಯ ಧಾರೇಶ್ವರ, ಬಂಟ್ವಾಳದ ವಿಟ್ಲ ಶಂಭು ಶರ್ಮ, ಶಿರಾ ತಾಲೂಕು ಬರಗೂರಿನ ಹನುಮಂತರಾಯಪ್ಪ ಮತ್ತು ಕೋಲಾರ ತಾಲ್ಲೂಕಿನ ವಕ್ಕಲೇರಿಯ ಎ.ಎಂ. ಮುಳವಾಗಲಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು ಪುರಸ್ಕಾರ ಹೊಂದಿದೆ.
ಫೆಬ್ರವರಿಯಲ್ಲಿ ಪ್ರಶಸ್ತಿ ಪ್ರದಾನ:
ಪಾರ್ತಿಸುಬ್ಬ ಪ್ರಶಸ್ತಿ , ಗೌರವ ಪ್ರಶಸ್ತಿ ಮತ್ತು ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ 2021ರ ಫೆಬ್ರವರಿ ಎರಡನೇ ಅಥವಾ 3ನೇ ವಾರದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಅಥವಾ ನಯನ ರಂಗಮಂದಿರದಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಪೊ.ಎಂ.ಎ.ಹೆಗಡೆ ವಿವರಿಸಿದರು.
ಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ, ಸದಸ್ಯರಾದ ರಾಧಾಕೃಷ್ಣ ಕಲ್ಚಾರ್, ಕದ್ರಿ ನವನೀತ ಶೆಟ್ಟಿ, ಸಹ ಸದಸ್ಯ ದಾಮೋದರ ಶೆಟ್ಟಿ ಇದ್ದರು.