ಲವ್ ಜಿಹಾದ್‍ಗೆ ಬಲಿಯಾಗಿ ಬದುಕು ಕಳೆದುಕೊಳ್ಳದಿರಿ: ಶರಣ್ ಪಂಪ್‍ವೆಲ್

ಮಂಗಳೂರು: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ದೌರ್ಜನ್ಯಕ್ಕೊಳಕ್ಕಾಗಿರುವ ಕೇರಳ ಕಣ್ಣೂರಿನ ಶಾಂತಿ ಜೂಬಿ ಯಾನೆ ಆಸಿಯಾ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಶಾಂತಿ ಜೂಬಿಗೆ ಧೈರ್ಯ ತುಂಬಿದ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಆಕೆಯನ್ನು ಮರಳಿ ಹಿಂದೂ ಧರ್ಮಕ್ಕೆ ಬರುವಂತೆ ಮನವೊಲಿಸಿದೆ. ಅಲ್ಲದೆ ಶಾಂತಿ ಜೂಬಿ ಠಾಣೆಯಲ್ಲಿ ದೂರು ದಾಖಲಿಸುವ ವೇಳೆ ಜೊತೆಗಿದ್ದು, ನೈತಿಕ ಧೈರ್ಯ ತುಂಬಿದೆ. ಶಾಂತಿ ಜೂಬಿಗೆ ನ್ಯಾಯ ಒದಗಿಸುವಲ್ಲಿ ನಮ್ಮ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಹೇಳಿದ್ದಾರೆ.
ಜೂಬಿ ಪೊಲೀಸ್ ಠಾಣೆಗೆ ತೆರಳಿದ್ದ ವೇಳೆ ಆಕೆಯ ಜೊತೆ ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್, ಪ್ರಮುಖರಾದ ಸುರೇಖಾ ರಾಜ್, ಲತೀಶ್ ಗುಂಡ್ಯ ಮತ್ತಿತರರು ಇದ್ದರು.
ಯುವತಿಯರೇ ಇನ್ನಾದರೂ ಜಾಗೃತರಾಗಿ
ಹಿಂದು ಯುವತಿಯರು ಇನ್ನಾದರೂ ಪಾಠ ಕಲಿಯಬೇಕು. ಲವ್ ಜಿಹಾದ್ ಹೆಸರಿನಲ್ಲಿ ನಡೆಯುವ ಕಪಟ ಪ್ರೀತಿ ಮತ್ತು ಆ ಬಳಿಕ ನಡೆಯುವ ಘೋರ ಅನಾಹುತಗಳಿಗೆ ಬಲಿಯಾಗುವ ಮೊದಲು ಎಚ್ಚೆತ್ತುಕೊಳ್ಳಬೇಕು. ಮತಾಂತರಗೊಂಡರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಇಳಿಯುತ್ತೆ ಎಂಬುವುದಕ್ಕೆ ಇಸ್ಲಾಂಗೆ ಮತಾಂತರಗೊಂಡು ಈಗ ಅತಂತ್ರ ಸ್ಥಿತಿಯಲ್ಲಿರುವ ಶಾಂತಿ ಜೂಬಿ ಪ್ರಕರಣ ಒಂದು ಜ್ವಲಂತ ನಿದರ್ಶನವಾಗಿದೆ ಎಂದು ಶರಣ್ ಪಂಪ್‍ವೆಲ್ ಹೇಳಿದ್ದಾರೆ.
ಶಾಂತಿ ಜೂಬಿಯವರು ತನಗೆ ಅನ್ಯಾಯವೆಸಗಿದ ಮುಸ್ಲಿಂ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ. ಆಕೆಗೆ ನೈತಿಕ ಧೈರ್ಯ ತುಂಬಿದ್ದು, ಮರಳಿ ಮಾತೃಧರ್ಮಕ್ಕೆ ಬರುವಂತೆ ಮನವಿ ಮಾಡಿದ್ದೇವೆ ಎಂದವರು ಹೇಳಿದ್ದಾರೆ.
ಪ್ರೀತಿ ಪ್ರೇಮದ ಹೆಸರಿನಲ್ಲಿ ಲವ್‍ಜಿಹಾದ್‍ನಂತಹ ಘಟನೆಗಳು ನಡೆಯುತ್ತಲೇ ಇವೆ. ಹಿಂದು ಯುವತಿಯರು ಕಪಟ ಪ್ರೀತಿಗೆ ಬಲಿಯಾಗಿ ಬದುಕು ಕಳೆದುಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ಆದ್ದರಿಂದ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಬರಲೇಬೇಕು. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಲವ್ ಜಿಹಾದ್‍ಗೆ ತಡೆಯೊಡ್ಡುವ ಕಾನೂನನ್ನು ತರಬೇಕು ಎಂದು ಶರಣ್ ಪಂಪ್‍ವೆಲ್ ಒತ್ತಾಯಿಸಿದ್ದಾರೆ.
ಶಾಂತಿಜೂಬಿಗೆ ಆಕೆಯನ್ನು ಮದುವೆಯಾದ ಇಬ್ರಾಹಿಂ ಖಲೀಲ್ ಕಟ್ಟೆಮಾರ್ ಮೋಸ ಮಾಡಿದ್ದು, ಇದರಲ್ಲಿ ಆತನ ಅಣ್ಣ ಶಿಹಾಬ್‍ನ ಪಾತ್ರ ಕೂಡ ಇದೆ ಎಂದು ಜೂಬಿ ಹೇಳಿದ್ದಾರೆ. ಆತನೂ ಸಾಕಷ್ಟು ಕಿರುಕುಳ ನೀಡಿರುವುದನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಶರಣ್ ಪಂಪ್‍ವೆಲ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ