ಹೊಸದಿಲ್ಲಿ :ಭಾರತೀಯ ಉದ್ಯಮರಂಗ ಚೇತರಿಕೆಯ ಆರೋಗ್ಯಪೂರ್ಣ ಸಂಕೇತವನ್ನು ಪ್ರದರ್ಶಿಸಿದ್ದು, 2021ರ ಮೊದಲ ಮೂರು ತಿಂಗಳಲ್ಲಿ ಹೆಚ್ಚಿನ ಕೆಲಸಗಾರರನ್ನು ಸೇರ್ಪಡೆಗೊಳಿಸುವ ಬಗ್ಗೆ ಉದ್ಯಮರಂಗ ಚಿಂತನೆ ನಡೆಸುತ್ತಿರುವುದು ಇದಕ್ಕೆ ಸ್ಪಷ್ಟ ಸಂಕೇತ ಎಂಬುದಾಗಿ ಸಮೀಕ್ಷೆಯೊಂದು ಮಂಗಳವಾರ ಹೇಳಿದೆ.
ಮ್ಯಾನ್ಪವರ್ ಗ್ರೂಪ್ ಎಂಪ್ಲಾಯ್ಮೆಂಟ್ ಔಟ್ಲುಕ್ ಸರ್ವೇ ದೇಶಾದ್ಯಂತ ಸುಮಾರು 1518 ಉದ್ಯಮಪತಿಗಳನ್ನು ಸಂಪರ್ಕಿಸಿ ನಡೆಸಿದ ಸಮೀಕ್ಷೆಯಂತೆ,2021ರ ಮೊದಲ ತ್ರೈಮಾಸಿಕದಲ್ಲಿ ಶೇ.5ರಷ್ಟು ಗುತ್ತಿಗೆ ಉದ್ಯೋಗ ಹೆಚ್ಚಳದ ಸೂಚನೆ ಲಭಿಸಿದೆ.ಇದರೊಂದಿಗೆ ಈ ತ್ರೈಮಾಸಿಕ(ಡಿಸೆಂಬರ್)ಕ್ಕೆ ಹೋಲಿಸಿದರೆ ಇದು ಶೇ.2 ಪಾಯಿಂಟ್ಗಳಷ್ಟು ಹೆಚ್ಚಾಗಿದೆ.
ಹಣಕಾಸು, ವಿಮಾರಂಗ, ರಿಯಲ್ ಎಸ್ಟೇಟ್, ಗಣಿ ಮತ್ತು ನಿರ್ಮಾಣ ಸೇರಿದಂತೆ ವಿವಿಧ ರಂಗಗಳಲ್ಲಿ ಡಿಸೆಂಬರ್ ತ್ರೈಮಾಸಿಕದಲ್ಲಿ ಋಣಾತ್ಮಕ ಬೆಳವಣಿಗೆಯ ಸಂಕೇತ ತೋರಿದರೆ, 2021ರ ಮೊದಲ ತ್ರೈಮಾಸಿಕದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಮಾರುಕಟ್ಟೆ ಚಾಲನೆ ಪಡೆಯುವ ಸೂಚನೆ ನೀಡಿದೆ ಎಂಬುದಾಗಿ ಸಮೀಕ್ಷೆ ಕಂಡುಕೊಂಡಿದೆ.
ಈ ತ್ರೈಮಾಸಿಕದಲ್ಲಿ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಧನಾತ್ಮಕ ಚೇತರಿಕೆಯ ವಾತಾವರಣದ ಆರೋಗ್ಯಪೂರ್ಣ ಸಂಕೇತ ಗೋಚರಿಸುತ್ತಿದೆ. ಜಿಯೋಪೊಲಿಟಿಕಲ್ ಸ್ಥಿರತೆ, ವೈವಿಧ್ಯಮಯ ಆರ್ಥಿಕತೆ, ಜನಸಂಖ್ಯೆಯಂತಹ ಮೂಲಭೂತ ಅಂಶಗಳನ್ನೊಳಗೊಂಡ ಭಾರತೀಯ ಸುಸ್ಥಿರ ಆರ್ಥಿಕತೆ ಈ ಚೇತರಿಕೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಆತ್ಮನಿರ್ಭರ ನೀತಿಯ ಉತ್ತೇಜನ
ಅಲ್ಲದೆ ಖಾಸಗಿ ರಂಗವನ್ನು ಉತ್ತೇಜಿಸುವ , ಸ್ಪರ್ಧಾತ್ಮಕತೆಯನ್ನು ಪ್ರೇರೇಪಿಸುವ ಮತ್ತು ಸ್ವಾವ ಲಂಬನೆ (ಆತ್ಮನಿರ್ಭರ)ಸಾಸುವುದೇ ಮುಂತಾದ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ ಕ್ರಮಗಳು ಕೂಡಾ ಇದರಲ್ಲಿ ತುಂಬ ಮಹತ್ವದ ಪಾತ್ರವಹಿಸಿದೆ . ಇತ್ತೀಚೆಗೆ ಸಂಸತ್ತಿನಲ್ಲಿ ಕೇಂದ್ರ ಸರಕಾರ ಅನುಮೋದನೆ ಪಡೆದಿರುವ ಕಾರ್ಮಿಕ ಸುಧಾರಣಾ ಮಸೂದೆಗಳು ಉದ್ಯೋಗ ಸೃಷ್ಟಿಗೆ ಇನ್ನಷ್ಟು ಪುಷ್ಟಿ ನೀಡಲಿದೆ .ಯಾಕೆಂದರೆ ಉದ್ಯೋಗಿಗಳಿಗೆ ನೆರವಾಗುವಂತಹ ಈ ಮಸೂದೆಗಳು ದೀರ್ಘಕಾಲದಿಂದ ನಿರೀಕ್ಷಿಸಲಾಗಿದ್ದಂತಹವುಗಳು . ಈ ಮಸೂದೆಗಳಿಂದಾಗಿ ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವೆ ಹೆಚ್ಚಿನ ವಿಶ್ವಾಸ-ಬಾಂಧವ್ಯ ನಿರ್ಮಾಣವಾಗುತ್ತದೆ ಎಂಬುದಾಗಿ ಸಮೀಕ್ಷೆ ನಡೆಸಿದ ಸಂಸ್ಥೆಯ ಆಡಳಿತ ನಿರ್ದೇಶಕ ಸಂದೀಪ್ ಗುಲಾಟಿ ಅಭಿಪ್ರಾಯ ಪಡುತ್ತಾರೆ.
ಹಾಗೆಯೇ ಹಬ್ಬದ ಋತುವಿನಿಂದಾಗಿ ಆರ್ಥಿಕತೆ ಚೇತರಿಸಿಕೊಂಡಿದ್ದು, ಇದೆಲ್ಲದರಿಂದಾಗಿ ಮುಂದಿನ ಆರರಿಂದ 9ತಿಂಗಳುಗಳಲ್ಲಿ ದೇಶದಲ್ಲಿ ಔದ್ಯೋಗಿಕ ರಂಗದಲ್ಲಿ ಮತ್ತೆ ಬಲವಾದ ಪುನಶ್ಚೇತನ ಕಂಡುಬರಲಿದೆ ಎಂಬುದಾಗಿ ಈ ಉದ್ಯಮಪತಿಗಳು ಆಶಾವಾದ ತಾಳಿರುವುದನ್ನು ಸಮೀಕ್ಷೆ ಬೊಟ್ಟು ಮಾಡಿದೆ. ಇದಕ್ಕೆ ಪುಷ್ಟಿ ನೀಡುವಂತೆ , ಶೇ.65ರಷ್ಟು ಕಂಪೆನಿಗಳು ತಾವು ಕೋವಿಡ್-19ರ ಪೂರ್ವದಲ್ಲಿದ್ದ ಪ್ರಮಾಣದ ಉದ್ಯೋಗಿಗಳನ್ನು ಮುಂದಿನ 9ತಿಂಗಳುಗಳೊಳಗೆ ಮರಳಿ ಸೇರ್ಪಡೆಗೊಳಿಸುವ ಸೂಚನೆ ನೀಡಿದ್ದಾರೆ. ಇಂತಹ ವಿಶ್ವಾಸ ವ್ಯಕ್ತಪಡಿಸಿದವರ ಪ್ರಮಾಣ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ.44ಮಾತ್ರವಿತ್ತು. ಈ ರೀತಿ ಉದ್ಯೋಗಿಗಳನ್ನು ಮರು ಸೇರ್ಪಡೆಗೊಳಿಸುವ ಕಂಪೆನಿಗಳಲ್ಲಿ ಸಣ್ಣಪ್ರಮಾಣದ ಉದ್ಯಮಗಳು ಮುಂಚೂಣಿಯಲ್ಲಿದ್ದರೆ, ಅನಂತರದ ಸ್ಥಾನಗಳಲ್ಲಿ ದೊಡ್ಡ ಮತ್ತು ಮಧ್ಯಮವರ್ಗದ ಕಂಪೆನಿಗಳಿವೆ. ವಲಯವಾರು ನೆಲೆಯಲ್ಲಿ ನೋಡಿದರೆ ಪಶ್ಚಿಮ ಭಾಗಕ್ಕಿಂತ ಪೂರ್ವ ಭಾಗ ಹೆಚ್ಚು ವೇಗವಾಗಿ ಚೇತರಿಸಿಕೊಳ್ಳುವ ಸೂಚನೆ ನೀಡಿದೆ ಎನ್ನುತ್ತದೆ ಸಮೀಕ್ಷೆ.
ಈ ಸಮೀಕ್ಷಾ ಸಂಸ್ಥೆ 2021ರ ಮೊದಲ ತ್ರೈಮಾಸಿಕದಲ್ಲಿ ಉದ್ಯೋಗ ಮಾರುಕಟ್ಟೆಗೆ ಸಂಬಂಸಿ 43ದೇಶಗಳಲ್ಲಿನ 38,000ಉದ್ಯೋಗದಾತರನ್ನು ಸಂದರ್ಶಿಸಿದೆ.ಈ ಪೈಕಿ 32ದೇಶಗಳಲ್ಲಿ ವೇತನದಾರರ ಪಟ್ಟಿಗೆ ಹೊಸ ಸೇರ್ಪಡೆಯಾಗಬಹುದೆಂದು ನಿರೀಕ್ಷಿಸಿದ್ದರೆ, ಆರು ದೇಶಗಳಲ್ಲಿ ಇದು ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದ ಅಂಶವಾಗಿದೆ.ತೈವಾನ್ನಲ್ಲಿ (ಶೇ.23), ಅಮೆರಿಕ(ಶೇ.17), ಸಿಂಗಾಪುರ(ಶೇ.15)ಗಳಲ್ಲಿ ಗುತ್ತಿಗೆ ಉದ್ಯೋಗ ಹೆಚ್ಚಳದ ಬಲವಾದ ಸೂಚನೆಗಳು ಕಂಡುಬಂದರೆ, ಬ್ರಿಟನ್(ಶೇ.-6), ಪನಾಮಾ(ಶೇ.-7), ಸ್ವಿಜಲ್ರ್ಯಾಂಡ್(ಶೇ.-4)ನಲ್ಲಿ ಕುಸಿತದ ಸಂಕೇತಗಳು ಗೋಚರಿಸಿವೆ.