ಯುವಪೀಳಿಗೆಗೆ ಸ್ವಾಮಿ ವಿವೇಕಾನಂದರ ವಿಚಾರಧಾರೆ ತಲುಪಿಸುವ ಉದ್ದೇಶ ಉತ್ತಮನಾಗು, ಉಪಕಾರಿಯಾಗು ಅಭಿಯಾನಯುವಪೀಳಿಗೆಗೆ ಸ್ವಾಮಿ ವಿವೇಕಾನಂದರ ವಿಚಾರಧಾರೆ ತಲುಪಿಸುವ ಉದ್ದೇಶ ಉತ್ತಮನಾಗು, ಉಪಕಾರಿಯಾಗು ಅಭಿಯಾನ

ಬೆಂಗಳೂರು: ಉತ್ತಮನಾಗು ಉಪಕಾರಿಯಾಗು (ಬಿ ಗುಡ್ ಡು ಗುಡ್) ಎಂಬ ಆಶಯವನ್ನಿಟ್ಟುಕೊಂಡು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಪ್ರತಿ ಯುವಕರಿಗೆ ತಲುಪಿಸುವ ನಿಟ್ಟಿನಲ್ಲಿ ಸಮರ್ಥ ಭಾರತ ಸಂಘಟನೆಯು 2021ರ ಜ.12 ರಿಂದ 26ರವರೆಗೆ 14 ದಿನಗಳ ಕಾಲ ಅಭಿಯಾನವನ್ನು ನಡೆಸಲಿದೆ ಎಂದು ಸಮರ್ಥ ಭಾರತದ ಪ್ರಮುಖ ಮಾರ್ಗದರ್ಶಕ ನಾ.ತಿಪ್ಪೇಸ್ವಾಮಿ ಹೇಳಿದರು.
ಸಮರ್ಥ ಭಾರತದ ವತಿಯಿಂದ ಆಯೋಜಿಸಿದ್ದ ಸ್ವಯಂ ಸೇವಕರ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆತ್ಮ ನಿರ್ಭರ ಭಾರತ ಕಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಸ್ವದೇಶಿ ಈ ಮೂರು ವಿಚಾರಗಳನ್ನು ಬಿ ಗುಡ್ ಡು ಗುಡ್ ಅಭಿಯಾನದಲ್ಲಿ ಒತ್ತಿ ಹೇಳಲಾಗುತ್ತಿದೆ. ಇವುಗಳನ್ನು ಪ್ರತಿ ಯುವಕರಿಗೆ ತಲುಪುವಂತೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸ್ವಯಂ ಸೇವಕರಾಗಲು ಮುಂದೆ ಬರಬೇಕು ಎಂದರು.
ಮನೆಯ ವ್ಯವಹಾರ, ವೈಯಕ್ತಿಕ ನಡವಳಿಕೆ ಅಥವಾ ಸಮಾಜದ ಉಳಿದ ಬಂಧುಗಳ ಜೊತೆಗಿನ ವ್ಯವಹಾರ ಸೇರಿದಂತೆ ನಾವು ಮಾಡುವ ಪ್ರತಿ ಯೋಚನೆ, ಕೆಲಸ ಮತ್ತು ಕಾರ್ಯಚಟುವಟಿಕೆಗಳು ಸಮಾಜಕ್ಕೆ ಪೂರಕವಾಗಿರಬೇಕು. ಇಂತಹ ಕಾರ್ಯ ಚಟುವಟಿಕೆಗಳನ್ನು ನಡೆಸಲು ಯೋಗ್ಯ ಮಾರ್ಗದರ್ಶಕರಾಗಿ ಸ್ವಾಮಿ ವಿವೇಕಾನಂದರು ಕಾಣಿಸಿಕೊಳ್ಳುತ್ತಿದ್ದು, ಇವರ ವಿಚಾರಧಾರೆಗಳನ್ನು ಎಲ್ಲೆಡೆ ಪಸರಿಸಬೇಕಾಗಿದೆ ಎಂದರು.
ಆತ್ಮ ನಿರ್ಭರ ಭಾರತ ಕಟ್ಟಬೇಕಾದರೆ ಯುವಕರು ಸಮಾಜದ ಕುರಿತು ಚಿಂತನೆ ನಡೆಸುವುದು ಹಾಗೂ ಸಮಾಜ ಉಪಯೋಗಿಯ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕೆ ಪೂರಕವಾಗಿ ಸಮರ್ಥ ಭಾರತ ಈ ಬಾರಿಯೂ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ಜ.10 ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿವೇಕಾನಂದರ ಕುರಿತು ವಾಕಥಾನ್, ಜ.12ರಿಂದ ಜ.14ರ ವರೆಗೆ ಪ್ರತಿ ದಿನ ಸಂಜೆ ಸಮರ್ಥ ಭಾರತ ಫೇಸ್ ಬುಕ್ ಪೇಜ್‍ನಲ್ಲಿ ವಿವೇಕಾನಂದರ ಕುರಿತು ಉಪನ್ಯಾಸ ಸರಣಿ ಕಾರ್ಯಕ್ರಮಗಳು, ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಬಿ ಗುಡ್ ಡು ಗುಡ್ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.
ಸಮರ್ಥ ಭಾರತ ಟ್ರಸ್ಟಿನ ಟ್ರಸ್ಟಿಗಳಾದ ರಾಜೇಶ್ ಪದ್ಮಾರ್ ಹಾಗೂ ದೇವಾನಂದ ಅವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ