ಕಾಸರಗೋಡು: ಶಬರಿಮಲೆ ಅಭಿವೃದ್ಧಿಗೆ ಕೇಂದ್ರ ಸರಕಾರವು ಬಿಡುಗಡೆಗೊಳಿಸಿದ ಅನುದಾನವನ್ನು ಕೇರಳದ ಎಡರಂಗ ಸರಕಾರವು ಸದ್ಬಳಕೆ ಮಾಡಿಲ್ಲ ಎಂದು ಬಿಜೆಪಿ ಕೇರಳ ರಾಜ್ಯ ಮಾಜಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಆರೋಪಿಸಿದ್ದಾರೆ.
ಅವರು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಪ್ರಚಾರಾರ್ಥ ಅಂಬಲಪುಳ ವಿಧಾನಸಭಾ ಕ್ಷೇತ್ರದ ಕರುವೋಡಿ ಎಂಬಲ್ಲಿ ಜರಗಿದ ಎನ್ಡಿಎ ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರವು ಶಬರಿಮಲೆ ಅಭಿವೃದ್ಧಿಗಾಗಿ ನೀಡಿದ್ದ 20 ಕೋ.ರೂ.ಗಳನ್ನು ವ್ಯಯಿಸದೇ ಶಬರಮಲೆಯ ಅಭಿವೃದ್ಧಿಯನ್ನು ಕಡೆಗಣಿಸಿದೆ. ಅಲ್ಲದೇ ಇದಕ್ಕೆ ಸಕಾರಣವನ್ನು ನೀಡಲು ಪಿಣರಾಯಿ ವಿಜಯನ್ ಸರಕಾರವನ್ನು ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದರೂ ಸರಕಾರ ಮೌನವಹಿಸಿರುವುದು ಆಘಾತಕಾರಿ ಎಂದು ಅವರು ಹೇಳಿದರು.
ಈ ಪವಿತ್ರ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಭಕ್ತರಿಗೆ ಸೂಕ್ತ ಸೌಕರ್ಯ ಕಲ್ಪಿಸುವ ಬದಲಿಗೆ, ಶಬರಿಮಲೆಗೆ ದರುಶನಕ್ಕೆ ಆಗಮಿಸುವ ಅಯ್ಯಪ್ಪ ಭಕ್ತರಿಗೆ ತಡೆಯೊಡ್ಡುವುದು ಹಾಗೂ ಕ್ಷೇತ್ರದ ಆಚಾರ ಅನುಷ್ಠಾನಗಳಿಗೆ ಅಪಮಾನ ಮಾಡುವುದೇ ರಾಜ್ಯ ಸರಕಾರದ ನೀತಿಯಾಗಿರುವಂತಿದೆ ಎಂದು ಅವರು ದೂರಿದರು.
ಕೇರಳದ ಕಮ್ಯೂನಿಸ್ಟ್ ಸರಕಾರವು ಜನವಿರೋಯಾಗಿದ್ದು, ಕಳ್ಳ ಸಾಗಾಟ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಜನರ ಸ್ಪಷ್ಟ ಅರಿವಿಗೆ ಬಂದಿದೆ. ಈ ಬಾರಿಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದಾದ್ಯಂತ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಲಿದೆ ಎಂದು ಕುಮ್ಮನಂ ರಾಜಶೇಖರನ್ ಈ ಸಂದರ್ಭ ವಿಶ್ವಾಸ ವ್ಯಕ್ತಪಡಿಸಿದರು.