ಎಡನೀರು ಮಠದಲ್ಲಿ ಭಕ್ತರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮ ಶ್ರೀ ಸಚ್ಚಿದಾನಂದ ಸ್ವಾಮೀಜಿ ಪೀಠಾರೋಹಣ

ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ತೋಟಕಾಚಾರ್ಯ ಮಹಾಸಂಸ್ಥಾನದ ಕಾಸರಗೋಡು ಜಿಲ್ಲೆಯ ಎಡನೀರು ಮಠದ 14ನೇ ಯತಿವರ್ಯರಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಬುಧವಾರ ಶುಭ ಮೂಹೂರ್ತದಲ್ಲಿ ಪೀಠಾರೋಹಣ ಮಾಡಿದರು.
ಎಡನೀರು ಮಠದಲ್ಲಿ ಬುಧವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ವಿವಿಧ ಮಠಾೀಶರು ಹಾಗೂ ಋತ್ವಿಜರ ನಿರ್ದೇಶನಾನುಸಾರ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಸರ್ವಜ್ಞ ಪೀಠವನ್ನು ಅಲಂಕರಿಸಿದರು. ಬಳಿಕ ವೈದಿಕ ವಿದ್ವಾಂಸರು, ಋತ್ವಿಜರು ಮಂತ್ರಘೋಷಣೆಗಳ ಮೂಲಕ, ಪುಣ್ಯ ತೀರ್ಥ ಪ್ರಸಾದಗಳನ್ನು ನೀಡಿ, ಶ್ರೀಗಳನ್ನು ಪೀಠದಲ್ಲಿ ಅವರನ್ನು ಕುಳ್ಳಿರಿಸಲಾಯಿತು.
ಬಳಿಕ ಶ್ರೀಮಠದಲ್ಲಿ ಧರ್ಮ ಸಭೆ ನಡೆಯಿತು. ವೇದಿಕೆಯಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾತೀರ್ಥ ಸ್ವಾಮೀಜಿ, ಚಿನ್ಮಯ ಮಿಶನ್‍ನ ಶ್ರೀ ನಿತ್ಯಾನಂದ ಸ್ವಾಮೀಜಿ, ಎಡನೀರು ಮಠದ ಆಡಳಿತಾಕಾರಿ ರಾಜೇಂದ್ರ ಕಲ್ಲೂರಾಯ, ಪೀಠಾರೋಹಣ ಸಮಿತಿಯ ಅಧ್ಯಕ್ಷ ಟಿ.ಶ್ಯಾಮ ಭಟ್, ಪೀಠಾರೋಹಣ ಸಮಿತಿಯ ಕಾರ್ಯಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹಾಗೂ ಕರ್ನಾಟಕ ರಾಜ್ಯ ಸರಕಾರದ ಪರವಾಗಿ ಮುಜುರಾಯಿ ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಭಾಗವಹಿಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ ಸಂದೇಶ ಪತ್ರವನ್ನು ಶ್ರೀಗಳಿಗೆ ನೀಡಿದರು.
ಅ.27ರಂದು ಪೂರ್ವಾಶ್ರಮದ ಜಯರಾಮ ಮಂಜತ್ತಾಯ ಅವರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಂಬ ಅಭಿದಾನದೊಂದಿಗೆ ಸೋಮವಾರ ಬೆಳಗ್ಗೆ ಕಾಂಚಿ ಕಾಮಕೋಟಿ ಶ್ರೀ ವಿಜಯೇಂದ್ರ ಸರಸ್ವತೀ ಶ್ರೀಗಳಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ