ಬೆಂಗಳೂರು: ಅಕ್ರಮ ಆಸ್ತಿ ಗಳಿಕೆಯ ಆರೋಪಗಳ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಮಂತ್ರಿ ಡಿ.ಕೆ.ಶಿವಕುಮಾರ್ ಬುಧವಾರ ಸಿಬಿಐ ತನಿಖಾದಳದ ಮುಂದೆ ಖುದ್ದು ವಿಚಾರಣೆಗೆ ಹಾಜರಾದರು. ಇದೇ ವೇಳೆ ಇವರ ಆಪ್ತರೊಬ್ಬರು ಸಿಬಿಐ ವಶಕ್ಕೆ ಪಡೆದಿದ್ದ ಹಣ ಹಿಂದಿರುಗಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಡಿಕೆಶಿ ನಿವಾಸ ಸೇರಿದಂತೆ ಒಟ್ಟು 9ಕಡೆ ನಡೆದಿದ್ದ ಸಿಬಿಐ ದಾಳಿಯಲ್ಲಿ 57ಲಕ್ಷ ನಗದು ಹಾಗೂ 74ಕೋಟಿ ರೂಪಾಯಿಗಳಿಗೂ ಅಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ನೀಡುವಂತೆ ನ.21ರಂದು ಸಮನ್ಸ್ ಜಾರಿ ಮಾಡಿತ್ತು. ಈ ಮೇರೆಗೆ ಅವರು ಗಂಗಾನಗರದ ಸಿಬಿಐ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾದರು.
ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರು ನಿಧನ ಹೊಂದಿರುವ ಹಿನ್ನೆಲೆ ಅಂತಿಮ ದರ್ಶನ ಮಾಡಲು ಸಂಜೆ 7ಗಂಟೆಗೆ ಗುಜರಾತ್ಗೆ ತೆರಳಬೇಕಿದ್ದು ತನಿಖೆಯಿಂದ ಒಂದು ದಿನದ ಮಟ್ಟಿಗೆ ವಿನಾಯ್ತಿ ನೀಡಲು ಅವರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ತನಿಖಾಕಾರಿಗಳು ಕೇವಲ 45 ನಿಮಿಷಗಳ ಕಾಲ ಮಾತ್ರ ವಿಚಾರಣೆಗೆ ಗುರಿಪಡಿಸಿ ಮುಂದಿನ ವಿಚಾರಣೆ ಸಮಯದಲ್ಲಿ ಖುದ್ದು ಹಾಜರಿರಲು ಸೂಚಿಸಿತು.
ನನ್ನ ಮೇಲೆ ಮಾತ್ರ ಸಿಬಿಐ ತನಿಖೆ ಯಾಕೆ ?
ವಿಚಾರಣೆ ಹಾಜರಾಗುವ ಮುನ್ನ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ತಾನು ಮಾತ್ರ ಆಸ್ತಿ ಸಂಪಾದಿಸಿರುವುದಾ? ಬೇರೆ ಯಾರ ಮೇಲೂ ನಡೆಸದ ತನಿಖೆ ತನ್ನ ಮೇಲೆ ಮಾತ್ರ ಯಾಕೆ ಎಂದು ಪ್ರಶ್ನಿಸಿದರು.
ತನ್ನ ಮೇಲೆ ನಡೆಸಲಾಗುತ್ತಿರುವ ತನಿಖೆ ದ್ವೇಷದ ರಾಜಕೀಯವಾಗಿದ್ದು, ತಾನೇನು ಮಾಡಬಾರದಂತಹ ಕೆಲಸ ಮಾಡಿಲ್ಲ. ಹೀಗಾಗಿ ಯಾವುದಕ್ಕೂ ಹೆದರುವುದಿಲ್ಲ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ತನ್ನ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಲಾಗಿದೆ. ಇದುವರೆಗೆ ರಾಜ್ಯದಲ್ಲಿ ಈ ರೀತಿ ಯಾರ ಮೇಲೆ ತನಿಖೆ ನಡೆಸಲಾಗಿದೆ. ತಾನು ಮಾತ್ರವೇ ಆಸ್ತಿ ಸಂಪಾದಿಸಿರುವುದು? ತಾನೇನು ಲಂಚ ಪಡೆದಿದ್ದೇನಾ? ಇಂಧನ ಸಚಿವನಾಗಿದ್ದಾಗ ಅಕ್ರಮ ಮಾಡಿದ್ದೇನಾ? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಈ ಎಲ್ಲದರ ಬಗ್ಗೆ ತನಿಖೆ ನಡೆಸಬಹುದಿತ್ತು. ಸಿಬಿಐ ತನಿಖೆ ಯಾಕೆ ಎಂದು ಪ್ರಶ್ನಿಸಿದರು.