ಬೆಂಗಳೂರು: ರಾಜ್ಯಸಭೆ ಸದಸ್ಯ ಅಶೋಕ್ ಗಸ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ಡಿ.1ರಂದು ಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಅಭ್ಯರ್ಥಿ ಕೆ.ನಾರಾಯಣ ಅವರು ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ.
ವಿಧಾನಸಭೆಯಲ್ಲಿ ಸಂಖ್ಯಾ ಬಲ ಇಲ್ಲದೇ ಇರುವುದರಿಂದ ಮುಖಭಂಗ ತಪ್ಪಿಸಿಕೊಳ್ಳಲು ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ಕಾರಣ, ಬಿಜೆಪಿ ಅಭ್ಯರ್ಥಿ ಕೆ.ನಾರಾಯಣ ಅವರು ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ. ಸೋಮವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿರುವುದರಿಂದ ಇದುವರೆಗೆ ಕಣದಲ್ಲಿ ಒಬ್ಬರೇ ಅಭ್ಯರ್ಥಿ ಉಳಿದುಕೊಂಡಿದ್ದಾರೆ.
ಹೆಚ್ಚಿದ ಬಿಜೆಪಿ ಬಲ
ಉಪಚುನಾವಣೆ ಬಳಿಕ ವಿಧಾನಸಭೆಯಲ್ಲಿ ಬಿಜೆಪಿ ಬಲ ಹೆಚ್ಚಾಗಿದ್ದು 116 ಇದ್ದ ಶಾಸಕರ ಸಂಖ್ಯೆ 118ಕ್ಕೇರಿದೆ. ಶಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಹಾಗೂ ರಾಜೇಶ್ ಗೌಡ ಗೆಲುವಿನ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಠೇವಣಿಯನ್ನು ಕಳೆದುಕೊಂಡಿವೆ. ಇದರೊಂದಿಗೆ ಮಸ್ಕಿ ಹಾಗೂ ಬಸವ ಕಲ್ಯಾಣ ಕ್ಷೇತ್ರಕ್ಕೆ ಇನ್ನೂ ಉಪಚುನಾವಣೆ ನಡೆಯಬೇಕಿದ್ದು ಈಗ ವಿಧಾನ ಸಭೆಯ ಸದಸ್ಯರ ಒಟ್ಟು ಸಂಖ್ಯೆ 223 ಆಗಿದೆ. ಈ ಪೈಕಿ ಒಬ್ಬರು ನಾಮನಿರ್ದೇಶಿತರಿದ್ದು ಇನ್ನುಳಿದಂತೆ 118 ಬಿಜೆಪಿ, 33 ಜೆಡಿಎಸ್ ಹಾಗೂ ಕಾಂಗ್ರೆಸ್67,ಬಿಎಸ್ಪಿ-1, ಸ್ವತಂತ್ರ-2ಶಾಸಕರಿದ್ದು ಕಾಂಗ್ರೆಸ್,ಜೆಡಿಎಸ್ ಸೇರಿ ಒಟ್ಟಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಗೆಲ್ಲುವ ಸಂಖ್ಯೆ ಎರಡೂ ಪಕ್ಷಗಳಲ್ಲಿ ಇಲ್ಲದಿರುವುದರಿಂದ ಬಿಜೆಪಿ ಅಭ್ಯರ್ಥಿಅವಿರೋಧ ಆಯ್ಕೆ ಘೋಷಿಸುವುದೊಂದೇ ಬಾಕಿಯಿದೆ.