ಉಡುಪಿ: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗುವ ಭವ್ಯ ಮಂದಿರದಲ್ಲಿ ವಿರಾಜಮಾನವಾಗುವ ಭಗವಾನ್ ಶ್ರೀರಾಮನನ್ನು ರಾಮನವಮಿಯಂದು ಸೂರ್ಯ ರಶ್ಮಿ ಸ್ಪರ್ಶಿಸಲಿವೆ!
ಬುಧವಾರ ದಿಲ್ಲಿಯ ತೀನ್ಮೂರ್ತಿ ಭವನದ ಸೆಮಿನಾರ್ ಹಾಲ್ನಲ್ಲಿ ನಡೆದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಮನವಮಿಯ ದಿನ ಸೂರ್ಯನ ಬೆಳಕು ಶ್ರೀರಾಮ ದೇವರನ್ನು ಸ್ಪರ್ಶಿಸುವುದಕ್ಕೆ ಅನುಕೂಲವಾಗುವಂತೆ ವೈಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮಂದಿರ ನಿರ್ಮಿಸಲು ಈ ಹಿಂದೆ ಸೂಚನೆ ನೀಡಿದ್ದರು. ಅದರಂತೆ ಟ್ರಸ್ಟ್ ಸಿಎಸ್ಐಆರ್ (ಕೌನ್ಸಿಲ್ ಫಾರ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್) ಸಂಸ್ಥೆಗೆ ಈ ಜವಾಬ್ದಾರಿಯನ್ನು ವಹಿಸಿದೆ. ಸಿಎಸ್ಐಆರ್ ಸಂಸ್ಥೆಯವರು ಇದನ್ನು ಮಾಡಲು ಸಾಧ್ಯವಿದೆ, ಇದಕ್ಕೆ ಪೂರಕ ಪ್ರಯತ್ನ ನಡೆಸುವುದಾಗಿ ಒಪ್ಪಿಗೆ ನೀಡಿದ್ದಾರೆ.
ಕೂಪನ್-ರಸೀದಿಯಲ್ಲಿ ದೇಣಿಗೆ ಸಂಗ್ರಹ
ರಾಮಮಂದಿರ ನಿರ್ಮಾಣಕ್ಕೆ ಭಾರೀ ಸಂಪನ್ಮೂಲದ ಆವಶ್ಯಕತೆ ಇರುವುದರಿಂದ ಧನ ಸಂಗ್ರಹ ನಡೆಯಬೇಕಿದೆ. ವಿಶ್ವದಾದ್ಯಂತ ಪ್ರತೀ ರಾಮಭಕ್ತನೂ ಕನಿಷ್ಠ 10 ರೂ. ದೇಣಿಗೆ ನೀಡಬೇಕು. ಪ್ರತೀ ಕುಟುಂಬ 100 ರೂ. ದೇಣಿಗೆ ಕೊಡಬೇಕು. ಇದಕ್ಕಾಗಿ ಟ್ರಸ್ಟ್ 10 ರೂ.ನಿಂದ 2000 ರೂ.ಗಳವರೆಗೆ ಕೂಪನ್ ಹಾಗೂ 2ಸಾವಿರಕ್ಕೂ ಮೇಲ್ಪಟ್ಟ ಮೊತ್ತಕ್ಕೆ ರಸೀದಿ ಮುದ್ರಿಸಲಿದೆ. ಮಕರ ಸಂಕ್ರಾತಿಯಿಂದ ಮಾಘ ಹುಣ್ಣಿಮೆಯವರೆಗೆ 45 ದಿನಗಳ ಕಾಲ ದೇಣಿಗೆ ಸಂಗ್ರಹ ಅಭಿಯಾನ ನಡೆಯಲಿದೆ. ಸ್ಥಳೀಯವಾಗಿ ಅಭಿಯಾನ ನಡೆಸುವ ಕುರಿತು ರೂಪುರೇಷೆಯನ್ನು ಇನ್ನಷ್ಟೇ ಮಾಡಲಾಗುತ್ತದೆ.