ಬೆಂಗಳೂರು: ಉಪಚುನಾವಣೆ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಶುಕ್ರವಾರ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾರಣಾಂತರಗಳಿಂದ ಸಂಪುಟ ವಿಸ್ತರಣೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಆರ್.ಆರ್. ನಗರ ಹಾಗೂ ಶಿರಾ ಉಪಚುನಾವಣೆ ಮುಕ್ತಾಯವಾದ ನಂತರ ಹೊಸದಿಲ್ಲಿಗೆ ತೆರಳುತ್ತೇನೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಬಂದ ಬಳಿಕ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇನ್ನು ಸಂಪುಟ ವಿಸ್ತರಣೆಯೋ ? ಪುನಾರಚನೆಯೋ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಲಿಲ್ಲ. ವರಿಷ್ಠರ ತೀರ್ಮಾನದ ಮೇಲೆಯೇ ಎಲ್ಲವೂ ನಿಂತಿದೆ ಎಂದರು.
ಪ್ರಸ್ತುತ ಸಂಪುಟದಲ್ಲಿ 6 ಸಚಿವ ಸ್ಥಾನಗಳು ಖಾಲಿಯಿದ್ದು, ಸಂಪುಟ ಸೇರುವವರ್ಯಾರು ? ಯಾರ್ಯಾರಿಗೆ ಯಾವ್ಯಾವ ಖಾತೆ ಸಿಗಲಿವೆ ? ಖಾತೆಗಳು ಬದಲಾವಣೆ ಆಗಲಿವೆಯೇ ಎಂಬಿತ್ಯಾದಿ ಕುತೂಹಲಕಾರಿ ಪ್ರಶ್ನೆಗಳಿಗೆ ಸಿಎಂ ದಿಲ್ಲಿ ಭೇಟಿ ಬಳಿಕ ಉತ್ತರ ಸಿಗಲಿದೆ.