ಹೊಸದಿಲ್ಲಿ: ದೇಶದ ಸರ್ವರಿಗೂ ಕೊರೋನಾ ಲಸಿಕೆ ದೊರಕಿಸುವ ದೃಷ್ಟಿಯಿಂದ, ಲಸಿಕೆ ವಿತರಣೆ ಹಾಗೂ ನಿರ್ವಹರಣೆಗಾಗಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಮಿತಿ ರಚಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.
ಅಲ್ಲದೇ ಲಸಿಕೆ ಕುರಿತಾಗಿ ಹರಿದಾಡುವ ವದಂತಿಗಳಿಗೆ ಕಡಿವಾಣ ಹಾಕಲು ತ್ವರಿತವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸುವಂತೆಯೂ ಸೂಚಿಸಿದೆ. ಜತೆಗೆ ಲಸಿಕೆ ಅಭಿಯಾನದ ವೇಳೆ ದೈನಂದಿನ ಆರೋಗ್ಯ ಸೇವೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದೂ ಎಚ್ಚರಿಸಿದೆ.
ಮುಂದಿನ ಒಂದು ವರ್ಷದಲ್ಲಿ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಮೊದಲು ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದ್ದು, ಕ್ರಮೇಣವಾಗಿ ಸಮಾಜದ ಎಲ್ಲ ವರ್ಗದ ಜನರಿಗೂ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಹಾಗಾಗಿ ದೇಶದ ಸರ್ವರಿಗೂ ಲಸಿಕೆ ದೊರೆಕಿಸುವುದು ಬಹುದೊಡ್ಡ ಜವಾಬ್ದಾರಿಯಾಗಿದ್ದು, ಇದಕ್ಕಾಗಿಯೇ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸುವಂತೆ ಸೂಚಿಸಲಾಗಿದೆ.
ಈ ಸಮಿತಿಗಳು ಲಸಿಕೆ ವಿತರಿಸುವ ಸಿದ್ಧತೆಗಳ ಪರಿಶೀಲಿಸುವುದರೊಂದಿಗೆ, ಲಸಿಕೆ ಸಂಗ್ರಹಣೆ, ತಲುಪಲು ಅತ್ಯಂತ ಕಷ್ಟವಿರುವ ಪ್ರದೇಶಗಳಿಗೆ ಲಸಿಕೆ ವಿತರಿಸುವ ಕುರಿತು ಕಾರ್ಯತಂತ್ರ ರೂಪಿಸಲಿವೆ.
ಇನ್ನು ಈ ಕುರಿತಾಗಿ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯ ಸಮಿತಿ(ಎಸ್ಎಸ್ಸಿ) ಹಾಗೂ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ನೇತ್ತೃತ್ವದಲ್ಲಿ ರಾಜ್ಯ ಕ್ರಿಯಾಪಡೆ (ಎಸ್ಎಸ್ಎಫ್) ಸ್ಥಾಪಿಸುವಂತೆ ಸೂಚಿಸಿದ್ದಾರೆ. ಜತೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಜಿಲ್ಲಾ ಕ್ರಿಯಾಪಡೆಯನ್ನೂ ರಚಿಸಲು ತಿಳಿಸಿದ್ದಾರೆ. ಪತ್ರದೊಂದಿಗೆ ಸಮಿತಿಗಳು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಮಾರ್ಗಸೂಚಿಯನ್ನೂ ನೀಡಿದ್ದಾರೆ.