ಕೇಂದ್ರದಿಂದ ಯಶಸ್ವಿ ಕೋವಿಡ್ ನಿಗ್ರಹ : ಕೇಂದ್ರ ಸಚಿವ ಜೋಶಿ ದೇಶದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲ

ಹುಬ್ಬಳ್ಳಿ: ದೇಶದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಘೋಷಣೆ ಸಾಧ್ಯತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂತಹ ಯಾವುದೇ ಪ್ರಸ್ತಾಪ ಸದ್ಯ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಅವರು ಹೇಳಿದರು. ಕೊರೋನಾ ಸೋಂಕು ತಡೆಯುವ ದಿಶೆಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಸರ್ಕಾರ ಲಾಕ್‍ಡೌನ್ ಘೋಷಿಸಿತ್ತು. ಈ ವೇಳೆ ಕೋವಿಡ್ ಮಾರ್ಗಸೂಚಿಯೂ ಜಾರಿಯಾಯಿತು. ಒಟ್ಟಿನಲ್ಲಿ ದೇಶದಲ್ಲಿ ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಕ್ರಮ ಹಾಗೂ ಮುನ್ನೆಚ್ಚರಿಕೆ ವಹಿಸಿದೆ. ಅಲ್ಲದೆ ಕೋವಿಡ್ ಕಾರ್ಯನಿರ್ವಹಣೆ ದೇಶದಲ್ಲಿ ಯಶಸ್ವಿಯಾಗಿ ಮುಂದುವರಿದಿದೆ. ಆದ್ದರಿಂದ ಪುನಃ ಲಾಕ್‍ಡೌನ್ ಪ್ರಸ್ತಾಪ ಕೇಂದ್ರದ ಮುಂದಿಲ್ಲ ಎಂದು ಅವರು ಒತ್ತಿ ಹೇಳಿದರು.
ನಾಗರಿಕರು ಸುರಕ್ಷತೆ ಹಾಗೂ ಸಾಮಾಜಿಕ ಅಂತರದೊಂದಿಗೆ ಆರೋಗ್ಯ ಕಾಳಜಿ ವಹಿಸಬೇಕು. ಅಲ್ಲದೆ, ಕೊರೋನಾ ಭೀತಿಯಿಂದ ಮುಂಜಾಗ್ರತಾ ಕ್ರಮಗಳೊಂದಿಗೆ ದೇಶದ ಜನತೆ ಸುರಕ್ಷತೆಗೆ ಆದ್ಯತೆ ನೀಡುವುದು ಸೂಕ್ತ ಎಂದರು.
ಯೂರೋಪ್ ದೇಶಗಳಲ್ಲಿ ಕೆಲವೆಡೆ ಕೊರೋನಾ ಮತ್ತೆ ಉಲ್ಬಣಿಸಿದ್ದು, ಫ್ರಾನ್ಸ್, ಸ್ಪೈನ್‍ನಲ್ಲಿ ಎರಡನೆ ಸುತ್ತು ಲಾಕ್‍ಡೌನ್ ಶುರುವಾಗಿದೆ. ಭಾರತದಲ್ಲಿ ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದ್ದು , ಔಷ ಲಭ್ಯವಾಗುವತನಕ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಶುಭ್ರತೆ ಪಾಲಿಸುವುದು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮೊನ್ನೆಯಷ್ಟೆ ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ