ಹೊಸದಿಲ್ಲಿ :ಭಾರತ-ಚೀನಾ ಗಡಿವಿವಾದದ ನಡುವೆ ಯೋಧರ ಸುರಕ್ಷತೆಗಾಗಿ ಮನೆಯಲ್ಲಿ ದೀಪ ಹಚ್ಚಿ, ಪ್ರಾರ್ಥಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದ ಬೆನ್ನಲ್ಲೆ, ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಯಾವುದೇ ಪರಿಸ್ಥಿತಿಗಳನ್ನು ನಿಭಾಯಿಸಲು ಸಿದ್ಧರಾಗುವಂತೆ 3ಸೇನಾ ಪಡೆಗಳಿಗಳಿಗೂ ಕರೆ ನೀಡಿದ್ದಾರೆ.
ಪ್ಯಾಂಗಾಂಗ್ ತ್ಸೋ ಸರೋವರದ ಎರಡು ಬದಿಗಳಲ್ಲೂ ಚೀನಾ ಸೇನೆಗೆ ಎದುರಾಗಿ ಭಾರತೀಯ ಸೇನೆ ನಿಯೋಜನೆಗೊಂಡಿದ್ದು, ಸೇನೆಗೆ ಮತ್ತಷ್ಟು ಬಲ ನೀಡುವ ನಿಟ್ಟಿನಲ್ಲಿ ಪೂರ್ವ ಲಡಾಖ್ನಲ್ಲಿ ನೌಕಾಪಡೆಯ ಮಾರ್ಕೋಸ್ ಕಮಾಂಡ್ಗಳ ನಿಯೋಜನೆಗೂ ಯೋಜಿಸಲಾಗಿದೆ.
ರಾವತ್ ಅವರ ಈ ಕರೆ ಕೂಡ ಅದನ್ನೇ ಸೂಚಿಸುತ್ತಿದ್ದು, ಹಿಮಶ್ರೇಣಿಯಲ್ಲಿ ಭಾರತೀಯ ವಿಶೇಷ ಸೇನಾ ಪಡೆಯ ಸಾಥಿಯಾಗಿ ಮಾರ್ಕೋಸ್ ಕಮಾಂಡರ್ಗಳು ನಿಲ್ಲಲಿದ್ದಾರೆ ಎಂದು ತಿಳಿದುಬಂದಿದೆ.
ಜತೆಗೆ 1597 ಕಿ.ಮೀ. ವಾಸ್ತವಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ನಿಯೋಜಿಸಲಾಗಿರುವ ಸೇನೆ, ಫಿರಂಗಿದಳ, ಟ್ಯಾಂಕರ್ಗಳನ್ನು ಈ ಹಿಂದಿಗಿಂತ ಹೆಚ್ಚು ಕ್ಷಿಪ್ರಗೊಳಿಸಲು ಯಾವುದೇ ಸಮಯದಲ್ಲಿ ದಾಳಿಯಾದರೆ ಅದನ್ನು ನಿಗ್ರಹಿಸಲು ಸನ್ನದಗೊಳಿಸುವಂತೆ ಹಾಗೂ ಮೂರು ಸೇನಾಪಡೆಗಳು ಸದಾ ಸಿದ್ಧವಾಗಿರುವಂತೆ ರಾವತ್ ಹೇಳಿದ್ದಾರೆಂದು ಅಕಾರಿಯೊಬ್ಬರು ಹೇಳಿದ್ದಾರೆ.