ಶಿವಮೊಗ್ಗ: ಪಾನ್ ಮಸಾಲಾ ನಿಷೇಧದಿಂದಾಗಿ ಅಡಿಕೆ ಬೆಳೆಗಾರರ ಮೇಲಾಗುವ ಪರಿಣಾಮದ ಬಗ್ಗೆ ಆತಂಕವಿದ್ದು ಇದನ್ನು ದೂರ ಮಾಡುವಂತೆ ಅಡಿಕೆ ಟಾಸ್ಕ್ ಪೊರ್ಸ್ ಹಾಗೂ ಅಡಿಕೆ ಮಾರಾಟ ಸಹಕಾರ ಸಂಸ್ಥೆಗಳ ನಿಯೋಗದಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಅಡಿಕೆ ಟಾಸ್ಕ್ ಪೊರ್ಸ್ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ಅಡಿಕೆ ಬೆಳೆ ಕಟಾವಿಗೆ ಬಂದ ಸಂದರ್ಭದಲ್ಲಿ ಏನಾದರೊಂದು ಗೊಂದಲವಾಗಿ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಇದರಿಂದಾಗಿ ಬೆಳೆಗಾರರು ಹಾಗೂ ವ್ಯಾಪಾರಿಗಳು ಕೂಡ ಆತಂಕಪಡುವಂತಾಗುತ್ತದೆ. ಪಾನ್ಮಸಾಲಾ ನಿಷೇಸುವುದರಿಂದ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರಬಹುದು ಎಂಬ ಅಂಶವನ್ನು ಗಮನಕ್ಕೆ ತರಲಾಗಿದೆ ಎಂದರು.
ಇದಕ್ಕೆ ಸ್ಪಂದಿಸಿರುವ ಸಿಎಂ ಯಡಿಯೂರಪ್ಪ, ಸರ್ಕಾರದ ಕಡೆಯಿಂದ ಅಡಿಕೆ ಬೆಳೆಗಾರರಿಗೆ ಸರ್ಕಾರದ ಕಡೆಯಿಂದ ಯಾವುದೇ ಆತಂಕವಿಲ್ಲ. ಅಡಿಕೆ ಬೆಳೆಗೆ ಮಾರಕವಾಗುವಂತಹ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದರು.
ತಾವೂ ಒಬ್ಬ ಅಡಿಕೆ ಬೆಳೆಗಾರನಾಗಿ ಬೆಳೆಗಾರರ ಸಂಕಷ್ಟದ ಅರಿವಿದ್ದು, ರೈತ ಸಮುದಾಯದ ಮೇಲೆ ಪರಿಣಾಮ ಬೀರು ಯಾವುದೇ ನಿರ್ಧಾರ ಸರ್ಕಾರದ ಕಡೆಯಿಂದ ಆಗುವುದಿಲ್ಲ ಎಂಬ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬೆಳೆಗಾರರು ಹಾಗೂ ವ್ಯಾಪಾರಿಗಳು ಆತಂಕಪಡಬೇಕಿಲ್ಲ ಎಂದು ಹೇಳಿದರು.
ರಾಮಯ್ಯ ಸಂಸ್ಥೆಗೆ ಕೋರಿಕೆ :
ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂಬ ಪ್ರಮಾಣ ಪತ್ರವನ್ನು ಹಿಂದಿನ ಸರ್ಕಾರ ನೀಡಿತ್ತು. ಇದರಿಂದಾಗಿ ತೀರ್ಪು ಅಡಿಕೆ ವಿರುದ್ಧವಾಗಿ ಬರುವ ಆತಂಕವಿತ್ತು. ಅಡಿಕೆ ಮಾರಾಟ ಸಹಕಾರ ಸಂಸ್ಥೆಗಳು ವಕೀಲರನ್ನು ಇಟ್ಟು ಅಡಿಕೆ ಪರವಾಗಿ ವಾದ ಮಾಡುತ್ತಿವೆ. ಆದರೆ ತಂಬಾಕು ಲಾಬಿಯಿಂದಾಗಿ ಅಡಿಕೆಯಲ್ಲಿ ಔಷೀಯ ಗುಣವಿದೆ ಎಂಬುದೇ ಗೌಣವಾಗಿದೆ ಎಂದರು.
ಅಡಿಕೆಯಲ್ಲಿ ಔಷೀಯ ಗುಣವಿರುವ ಬಗ್ಗೆ ಸಂಶೋಧನೆ ನಡೆಸಿ ವರದಿ ನೀಡಲು ರಾಮಯ್ಯ ಸಂಸ್ಥೆಗೆ ಅಡಿಕೆ ಕಾರ್ಯಪಡೆ ವತಿಯಿಂದ ಕೋರಲಾಗಿದೆ. ಸಂಶೋಧನಾ ವರದಿ ನೀಡಲು 32 ಲಕ್ಷ ರೂ. ಅಂದಾಜು ವೆಚ್ಚವನ್ನು ರಾಮಯ್ಯ ಸಂಶೋಧನಾ ಸಂಸ್ಥೆ ನೀಡಿದೆ. ಇದರ ಬಗ್ಗೆ ಕಾರ್ಯ ಪಡೆ ನಿರ್ಧಾರ ಕೈಗೊಳ್ಳಲಿದೆ ಎಂದರು.
ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಲಾಗುತ್ತಿದೆ. ಈ ಸಂಬಂಧ ಅಡ್ವೋಕೇಟ್ ಜನರಲ ಅವರಿಗೆ ಮಾಹಿತಿ ನೀಡಬೇಕಿದೆ. ಹೈಕೋರ್ಟ್ ಸಂಶೋಧನಾ ವರದಿಯನ್ನಿಟ್ಟು ವಾದ ಮಂಡಿಸಲು ಅಡಿಕೆ ಕಾರ್ಯಪಡೆ ನಿರ್ಧರಿಸಿದೆ. ಹೀಗಾಗಿ ಕಾರ್ಯಪಡೆಗೆ 2 ಕೋಟಿ ರೂ. ಅನುದಾನ ಸರ್ಕಾರದಿಂದ ನೀಡುವಂತೆ ಮನವಿ ಮಾಡಲಾಗಿದೆ ಎಂದರು.
ಕಸ್ತೂರಿ ರಂಗನ್ ವರದಿ ಬಗ್ಗೆ ಮಾಹಿತಿ:
ಮಲೆನಾಡಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಸಿದ್ಧತೆ ನಡೆದಿದ್ದು, ಇದರಿಂದ ಮಲೆನಾಡಿನ ತಾಲೂಕುಗಳ ಅನೇಕ ಗ್ರಾಮಗಳಿಗೆ ತೊಂದರೆಯಾಗಲಿದೆ ಎಂಬ ಅಂಶವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮಲೆನಾಡಿನ ಜನರ ಅಭಿಪ್ರಾಯ ಪಡೆದು ನಂತರ ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಲಾಗಿದೆ ಎಂದರು.
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿನಲ್ಲಿ ಯಾವುದೇ ಪ್ರಗತಿ ಸಾಧ್ಯವಿಲ್ಲ. ಹುಲ್ಲಿನ ಮನೆ ತೆಗೆದು ಆರ್ಸಿಸಿ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ. ಬೆಳೆ ಉಳಿಸಿಕೊಳ್ಳಲು ಕೀಟನಾಶಕ ಸಿಂಪಡಣೆಗೆ ಅವಕಾಶವಿಲ್ಲ. ಸೇತುವೆ, ಟಾರ್ ರಸ್ತೆ ನಿರ್ಮಾಣ ಸಾಧ್ಯವಿಲ್ಲ. ಇದೆಲ್ಲವನ್ನು ಸಿಎಂಗೆ ವಿವರಿಸಲಾಗಿದೆ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ಜಾರಿಗೊಳಿಸದೆ ಇರಲು ರಾಜ್ಯ ಸರ್ಕಾರದ ಪರವಾಗಿ ಹಸಿರು ಪೀಠದಲ್ಲಿ ವಾದಮಾಡಲು ವಕೀಲರ ನೇಮಕ ಮಾಡುವಂತೆಯೂ ಕೋರಲಾಗಿದ್ದು, ಇದಕ್ಕೂ ಕೂಡ ಪೂರಕ ಸ್ಪಂದನೆ ವ್ಯಕ್ತವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಡಿಕೆ ಮಾರಾಟ ಸಹಕಾರ ಸಂಸ್ಥೆಗಳ ಪ್ರಮುಖರಾದ ಕೊಂಕೋಡಿ ಪದ್ಮನಾಭ ಭಟ್, ವೈ.ಎಸ್. ಸುಬ್ರಹ್ಮಣ್ಯ ಯಡಗೆರೆ, ಸತೀಶ್ಚಂದ್ರ, ಶಿವಕುಮಾರ್ ಇದ್ದರು.