ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್ ಊಹೆ ಮಾಡದ ರೀತಿಯಲ್ಲಿ ಶಾಕ್ ನೀಡಿದೆ. ಎರಡರಲ್ಲಿ ಒಂದಷ್ಟೆ ನಿಮ್ಮ ಪಾಲಿಗೆ ಸಿಗುವುದು. ಯಾವುದು ಬೇಕು ನೀವೇ ತೀರ್ಮಾನ ಮಾಡಿ ಎಂದು ಹೈಕಮಾಂಡ್ ನಿಂದ ಸಿದ್ದರಾಮಯ್ಯರಿಗೆ ಖಡಕ್ ಸಂದೇಶ ರವಾನಿಸಿದೆ ಎಂದು ತಿಳಿದು ಬಂದಿದೆ.
ವಾರದ ಹಿಂದ ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ದೆಹಲಿಗೆ ತೆರಳಿ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಲಾಬಿ ಮಾಡಿದ್ದರಂತೆ. ಈಗ ವಿಪಕ್ಷ ಸ್ಥಾನಕ್ಕೆ ಲಾಬಿ ವಿಚಾರ ತಿಳಿಯುತ್ತಿದ್ದಂತೆ ಹೈಕಮಾಂಡ್ ಸಿದ್ದರಾಮಯ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಎರಡೆರಡು ಸ್ಥಾನಗಳನ್ನು ಒಬ್ಬರಿಗೆ ನೀಡಲು ಸಾಧ್ಯವಿಲ್ಲ. ಈಗಾಗಲೇ ಶಾಸಕಾಂಗದ ನಾಯಕರಾಗಿದ್ದೀರಿ, ಮತ್ತೆ ನಿಮಗೆ ವಿಪಕ್ಷ ನಾಯಕನ ಸ್ಥಾನ ನೀಡಲು ಸಾಧ್ಯವಿಲ್ಲ. ಎರಡು ಸ್ಥಾನಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ನಿಮ್ಮ ನಿರ್ಧಾರವನ್ನು ತಿಳಿಸಿ ಎಂದು ಹೈಕಮಾಂಡ್ ಚೆಂಡನ್ನು ಸಿದ್ದರಾಮಯ್ಯರ ಅಂಗಳಕ್ಕೆ ಎಸೆದಿದೆ.
ಚೆಂಡು ಸಿದ್ದರಾಮಯ್ಯರ ಅಂಗಳದಲ್ಲಿದ್ದು, ಎರಡು ಸ್ಥಾನಗಳಲ್ಲಿ ಒಂದನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಯಾವುದೇ ಒಂದು ಹುದ್ದೆಯನ್ನು ಒಪ್ಪಿಕೊಂಡರೂ ಸಿದ್ದರಾಮಯ್ಯರಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಒಂದು ಸ್ಥಾನ ಒಪ್ಪಿಕೊಂಡರೆ ಮತ್ತೊಂದನ್ನು ಕಳೆದುಕೊಳ್ಳಲಿದ್ದಾರೆ. ಹೈ ಕಮಾಂಡ್ ನಿಲುವಿನಿಂದ ಗೊಂದಲಕ್ಕೊಳಗಾಗಿರುವ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನದ ಮೇಲೆ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯನವರು ವಿಪಕ್ಷ ನಾಯಕರಾದ್ರೆ ಶಾಸಕಾಂಗ ಪಕ್ಷದ ನಾಯಕ ಯಾರಾಗ್ತಾರೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ವಿಪಕ್ಷ ನಾಯಕನ ಸ್ಥಾನದ ಮೇಲೆ ಮಾಜಿ ಡಿಸಿಎಂ ಜಿ. ಪರಮೇಶ್ವರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರಂಭದ ದಿನಗಳಲ್ಲಿ ಕಣ್ಣಿಟ್ಟಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಇಡಿ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಹೆಸರು ಪಟ್ಟಿಯಿಂದ ಕೈ ಬಿಡಲಾಗಿದೆಯಂತೆ. ಇಡಿ ಬಂಧನದಿಂದ ಮುಕ್ತವಾದ ಕೂಡಲೇ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.