ಪಕ್ಷಾಂತರ ಪ್ರಜಾಪ್ರಭುತ್ವಕ್ಕೆ ಮಾರಕ ಖಾಯಿಲೆ, ಇದರ ಇತ್ಯರ್ಥ ಆಗುವವರೆಗೂ ವಿಶ್ವಾಸ ಮತಯಾಚನೆ ಬೇಡ ಎಂದ ಸಿದ್ದರಾಮಯ್ಯ!

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಪಕ್ಷಾಂತರ ಪ್ರಕ್ರಿಯೆಗಳ ಕುರಿತು ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷಾಂತರ ಎಂಬುದು ಪ್ರಜಾಪ್ರಭುತ್ವಕ್ಕೆ ಅಂಟಿದ ಮಾರಕ ಖಾಯಿಲೆ ಇದನ್ನು ಹೋಗಲಾಡಿಸದೆ ಮಹಾತ್ಮಾ ಗಾಂಧಿ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಯಾಮಾವಳಿ 350ರ ಪ್ರಕಾರ ಸದನದಲ್ಲಿ ಸ್ಪೀಕರ್​ ಮಾತಿಗೆ ಕ್ರಿಯಾಲೋಪ ಪ್ರಸ್ತಾಪ ಮಾಡಿ ಮಾತನಾಡಿದ ಸಿದ್ದರಾಮಯ್ಯ, “ಪಕ್ಷಾಂತರದಿಂದಾಗಿ ಮೌಲ್ಯಾಧಾರಿತ ರಾಜಕಾರಣ ಇಂದು ಹಳ್ಳ ಹಿಡಿದಿದೆ. ವಿಪ್ ಜಾರಿಮಾಡುವ ನಮ್ಮ ಅಧಿಕಾರವನ್ನೂ ಸಹ ಸುಪ್ರೀಂ ಕೋರ್ಟ್ ಕಸಿದುಕೊಂಡಿದೆ” ಎಂದು ಸುಪ್ರೀಂ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಭಾರತ ರಾಜಕಾರಣದಲ್ಲಿ ಪಕ್ಷಾಂತರದ ಪ್ರಸಂಗದ ಕುರಿತು ಕುತೂಹಲಕಾರಿಯಾದಂತಹ ಹರಿಯಾಣದ ಗಯಾಲಾಲ್​ ಕಥೆ ಹೇಳಿದ ಅವರು, “1967ರಲ್ಲಿ ಗಯಾಲಾಲ್ ಒಂದೇ ದಿನದಲ್ಲಿ​ 3 ಬಾರಿ ಪಕ್ಷಾಂತರ ಮಾಡಿದರು. ಆಗ ದೇಶದಲ್ಲಿ ಪಕ್ಷಾಂತರದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಕಾಂಗ್ರೆಸ್​ನಿಂದ ಯುನೈಟೆಡ್​ ಫ್ರಂಟ್​ಗೆ ಮತ್ತೆ ಯುನೈಟೆಡ್​​ ಫ್ರಂಟ್​ನಿಂದ ಕಾಂಗ್ರೆಸ್​ಗೆ ಪಕ್ಷಾಂತರ ಮಾಡಿ ಇಡೀ ದೇಶದಲ್ಲಿ ಕೋಲಾಹಲ ಸೃಷ್ಟಿಸಿದ್ದರು.

ಈ ಘಟನೆಯಿಂದಾಗಿ ಎಚ್ಚೆತ್ತ ರಾಷ್ಟ್ರೀಯ ನಾಯಕರು ಪಕ್ಷಾಂತರದ ಕುರಿತು ಗಂಭೀರ ಚರ್ಚೆ ನಡೆಸಿದರು. ಪಕ್ಷಾಂತರ ಒಂದು ಪಿಡುಗು, ಪಕ್ಷಾಂತರ ಒಂದು ರೋಗ ಅದನ್ನು ನಿವಾರಣೆ ಮಾಡಲು ಮುಂದಾದರು.

ಸದನದಲ್ಲಿ 52ನೇ ತಿದ್ದುಪಡಿ ಮೂಲಕ 10ನೇ ಪರಿಚ್ಛೇದ ಬರಲು ಮಸೂದೆ​ ಪರಿಚಯಿಸಿದಾಗ ಮಹಾರಾಷ್ಟ್ರದ ಮಧು ದಂಡವತೆ ಚರ್ಚೆ ಮಾಡಿದರು. ಮಹಾತ್ಮ ಗಾಂಧಿ ಪುಣ್ಯತಿಥಿ ದಿನ ಈ ಮಸೂದೆ ಚರ್ಚೆಗೆ ಬರುತ್ತದೆ. ಗಾಂಧಿ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಶುದ್ದೀಕರಣವಾಗಬೇಕು. ಪಕ್ಷಾಂತರ ರೋಗಕ್ಕೆ ಕಡಿವಾಣ ಹಾಕಬೇಕು ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಅಂತಿಮವಾಗಿ  1985 ಮಾರ್ಚ್ 1 ರಂದು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಕೇಂದ್ರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು.

ಹೀಗೆ ಸಿದ್ದರಾಮಯ್ಯ ಪಕ್ಷಾಂತರ ಹೇಗೆ ರಾಜಕೀಯ ವ್ಯವಸ್ಥೆಯನ್ನು ಅಲುಗಾಡಿಸಿತು ಎಂಬ ಬಗ್ಗೆ ಭಾಷಣ ಮಾಡುತ್ತಿದ್ದಾಗ ಬಿಜೆಪಿ ನಾಯಕರು ಅಡ್ಡಿ ಪಡಿಸಿದರು. ಹೀಗಾಗಿ ಕೆಲವು ಕಾಲ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಸ್ಪೀಕರ್​ ಮಧ್ಯಪ್ರವೇಶಿಸಿ ಸಿದ್ದರಾಮಯ್ಯ ಮಾತಿಗೆ ಮತ್ತೆ ಅನುವುಮಾಡಿಕೊಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ