ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆ ಬಹುತೇಕ ಖಚಿತ

ಬೆಂಗಳೂರು: ಬಿ.ಎಸ್​. ಯಡಿಯೂರಪ್ಪ ಶುಕ್ರವಾರ ಸಂಜೆ 6.30 ಸುಮಾರಿಗೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಲ್ಲದೆ, ಸೋಮವಾರ ನೂತನ ಸರ್ಕಾರದ ಬಹುಮತ ಸಾಬೀತುಪಡಿಸಬೇಕಾದ ಒತ್ತಡ ಅವರ ಮೇಲಿದೆ. ಹಿನ್ನೆಲೆ ಕರೆಯಲಾಗಿರುವ ಅಧಿವೇಶನದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕಾಂಗ್ರೆಸ್ಕೂರಲಿದ್ದುಸಿದ್ದರಾಮಯ್ಯ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಯಡಿಯೂರಪ್ಪ ವಿಶ್ವಾಸಮತದ ಸಾಬೀತಿನ ವೇಳೆ ಅಧಿಕೃತ ಪ್ರತಿಪಕ್ಷ ಹಾಗೂ ಆ ಪಕ್ಷದ ನಾಯಕ ಇರಲೇಬೇಕಿರುವುದು ವಿಧಾನಮಂಡಲ ಅಧಿವೇಶನದ ಸಂಪ್ರದಾಯ. ಆದರೆ, ಈ ವರೆಗೆ ಕಾಂಗ್ರೆಸ್​ ಆ ಸ್ಥಾನಕ್ಕೆ ಯಾರನ್ನು ನೇಮಿಸಲಿದೆ? ಎಂಬ ಕುರಿತು ಕಳೆದ ಎರಡು ಮೂರು ದಿನಗಳಿಂದ ಚರ್ಚಾಸ್ಪದ ವಿಚಾರವಾಗಿದೆ. ಇನ್ನೂ ಕೆಲವು ಕಾಂಗ್ರೆಸ್ ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರನ್ನೇ ವಿಪಕ್ಷ ನಾಯಕನನ್ನಾಗಿ ಮಾಡಲು ಹೈ ಕಮಾಂಡ್​​ ಸೂಚಿಸಿದೆ ಎನ್ನಲಾಗುತ್ತದೆಯಾದರೂ ಈ ಕುರಿತು ಈವರೆಗೆ ಯಾವುದೇ ಸ್ಪಷ್ಟತೆ ದೊರಕಿಲ್ಲ.

ಸಿದ್ದರಾಮಯ್ಯ ಈ ಹಿಂದೆಯೂ ಕಾಂಗ್ರೆಸ್​ ಪಕ್ಷದ ನಾಯಕ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. 2008ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿ 2013ರಲ್ಲಿ ಅಧಿಕಾರದ ಗದ್ದುಗೆ ಹಿಡಿದು ಹಾಗೂ ಮುಖ್ಯಮಂತ್ರಿಯಾಗಿ ಆಯ್ಕೆಯಾದದ್ದು ಅವರ ಶ್ರೇಷ್ಠ ಸಾಧನೆ. ಹೀಗಾಗಿ ಅವರಿಗೆ ಮತ್ತೊಮ್ಮೆ ಈ ಜವಾಬ್ದಾರಿಯನ್ನು ಹೊರಿಸುವ ಲೆಕ್ಕಾಚಾರ ಕಾಂಗ್ರೆಸ್ ಪಾಳಯದಲ್ಲಿ ನಡೆದಿದೆ. ಆದರೆ, ಈ ರೇಸ್​ನಲ್ಲಿ ಮಾಜಿ ಉಪಮುಖ್ಯಮಂತ್ರಿಯಾಗಿದ್ದ ಡಾ.ಜಿ. ಪರಮೇಶ್ವರ್​ ಹೆಸರು ಸಹ ಕೇಳಿ ಬಂದ ಹಿನ್ನೆಲೆ ಇನ್ನು ಅಧಿಕೃತವಾಗಿ ಯಾರನ್ನು ಆಯ್ಕೆಮಾಡಿಲ್ಲ.

ಸೋಮವಾರ ಕಲಾಪ ಆರಂಭಕ್ಕೂ ಒಂದು ದಿನದ ಮುನ್ನವೇ ಅಧಿಕೃತ ಪ್ರತಿಪಕ್ಷ ತನ್ನ ಸ್ಥಾನಕ್ಕಾಗಿ ಸ್ಪೀಕರ್​ ಎದುರು ಹಕ್ಕು ಮಂಡಿಸಬೇಕು ಹಾಗೂ ಪ್ರತಿ ಪಕ್ಷನಾಯಕ ಯಾರು ಎಂದು ಪತ್ರ ಬರೆದು ಸ್ಪಷ್ಟನೆ ನೀಡಬೇಕು. ಹೀಗಾಗಿ ಶನಿವಾರ ಅಥವಾ ಭಾನುವಾರದ ಸಂಜೆಯ ಒಳಗಾಗಿ ಕಾಂಗ್ರೆಸ್ ಹೈಕಮಾಂಡ್ ಈ ಕುರಿತು ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಸ್ಥಾನವನ್ನು ಅಲಂಕರಿಸುವುದು ಬಹುತೇಕ ಖಚಿತವಾಗಿದೆ.

ಸೋಮವಾರ ಮಂಡನೆಯಾಗಲೇಬೇಕಿದೆ ಹಣಕಾಸು ವಿಧೇಯಕ:
ಹಣಕಾಸು ವಿಧೇಯಕ ಜುಲೈ.30ರ ಒಳಗಾಗಿ ಸದನದ ಮೇಲ್ಮನೆ ಹಾಗೂ ಕೆಳ ಮನೆಯಲ್ಲಿ ಮಂಡನೆಯಾಗಿ ಒಪ್ಪಿಗೆ ಪಡೆಯದೆ ಇದ್ದರೆ ಸರ್ಕಾರ ನಡೆಸಲು ಹಣ ಬಿಡುಗಡೆಯಾಗುವುದಿಲ್ಲ. ಸರ್ಕಾರ ನೌಕರರಿಗೆ ಸಂಬಳ ಸಹ ಕೊಡಲಾಗದ ಸ್ಥಿತಿಯನ್ನು ರಾಜ್ಯ ಎದುರಿಸಬೇಕಾಗುತ್ತದೆ. ಪರಿಣಾಮ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತದೆ.

ಇಂತಹ ಸಾಂವಿಧಾನಿಕ ಬಿಕ್ಕಟ್ಟನ್ನು ನಿವಾರಿಸುವ ಸಲುವಾಗಿಯೇ ಬಿಜೆಪಿ ಸರ್ಕಾರ ರಚಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಸೋಮವಾರದ ಅಧಿವೇಶನದಲ್ಲಿ ಮೊದಲ ಬಹುಮತ ಸಾಬೀತುಪಡಿಸಲಿರುವ ಬಿ.ಎಸ್. ಯಡಿಯೂರಪ್ಪ ನಂತರ ಮೇಲ್ಮನೆ ಹಾಗೂ ಕೆಳಮನೆ ಎರಡರಲ್ಲೂ ಹಣಕಾಸು ವಿಧೇಯಕವನ್ನು ಮಂಡಿಸಿ ಒಪ್ಪಿಗೆ ಪಡೆಯಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ