ಬೆಂಗಳೂರು: ಚಂದ್ರನ ಮೇಲೆ ಲ್ಯಾಂಡರ್ ಇಳಿಸಿವ ಇಸ್ರೋ ಸಾಹಸವನ್ನು ನೋಡಲು ಇಡೀ ದೇಶ ಕಾತರದಿಂದ ಕಾಯುತ್ತಿದ್ದ ಘಳಿಗೆ ಇನ್ನೇನು ಹತ್ತಿರವಾಗುತ್ತಿದೆ. ಶುಕ್ರವಾರ ತಡರಾತ್ರಿ ಚಂದ್ರನಲ್ಲಿರುವ ಕಾಣಿಸದ ನೆಲದಲ್ಲಿ ಇಳಿಯುವ ಸಾಹಸವನ್ನು ವಿಕ್ರಮ್ ನಡೆಸಲಿದೆ.
ಭೂಮಿಯ ನೈಸರ್ಗಿಕ ಉಪಗ್ರಹವಾಗಿರುವ ಚಂದ್ರನಲ್ಲಿ ಹುದುಗಿರುವ ರಹಸ್ಯಗಳನ್ನು ವಿಕ್ರಮ್ ಬೇಧಿಸಲಿದೆ. ಚಂದ್ರಯಾನ-2 ನೌಕೆ ಚಂದ್ರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆಗೆ ಪಾದಾರ್ಪಣೆ ಮಾಡಲಿದೆ. ಈ ಅಪರೂಪದ ಕ್ಷಣಗಳನ್ನು ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿದೆ.
ಈ ವರೆಗೆ ವಿಶ್ವದ 3 ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿದ ಇತಿಹಾಸವನ್ನು ಹೊಂದಿದೆ. ಶುಕ್ರವಾರ ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದರೆ ರಷ್ಯಾ, ಅಮೆರಿಕಾ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೆ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಈ ವರೆಗೆ ಯಾವುದೇ ರಾಷ್ಟ್ರಗಳೂ ಕಾಲಿಡದ ಹಾಗೂ ಬಿಸಿಲು ಕಾಣದ ದಕ್ಷಿಣ ಧ್ರುವವನ್ನು ಭಾರತ ಆಯ್ಕೆ ಮಾಡಿಕೊಂಡಿದೆ.
ಗಣೇಶ ಚತುರ್ಥಿಯ ದಿನವಾದ ಸೋಮವಾರ ಚಂದ್ರಯಾನ-2 ನೌಕೆಯಲ್ಲಿನ ಆರ್ಬಿಟರ್ ಹಾಗೂ ವಿಕ್ರಮ್ ಹೆಸರಿನ ಲ್ಯಾಂಡರ್ ಪ್ರತ್ಯೇಕಗೊಂಡಿದ್ದವು. ಬಳಿಕ ಲ್ಯಾಂಡರ್ ಅನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ವಿಜ್ಞಾನಿಗಳು ಎರಡು ಬಾರಿ ಕೆಳಕ್ಕೆ ಇಳಿಸಿದ್ದಾರೆ.
ಶುಕ್ರವಾರ ತಡರಾತ್ರಿ 1.30ರಿಂದ ಲ್ಯಾಂಡನ್ ಅನ್ನು ನಿಧಾನವಾಗಿ ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆ ನಡೆಸಲಾಗುತ್ತದೆ. ಸುಮಾರು 15 ನಿಮಿಷಗಳಲ್ಲಿ ಇದು ಮುಗಿಯುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ ತೆರೆದುಕೊಳ್ಳುತ್ತದೆ. ಒಳಗಿನಿಂದ ಪ್ರಜ್ಞಾನ್ ಹೆಸರಿನ ರೋವರ್ ಹೊರಬರುತ್ತದೆ. ಅದು ಒಟ್ಟು 14 ದಿನ 500 ಮೀ ದೂರವನ್ನು ಕ್ರಮಿಸಿ, ಚಂದ್ರನಿಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಗಳನ್ನು ರೋವರ್ ಸಂಗ್ರಹಿಸಲಿದೆ.
ಲ್ಯಾಂಡರ್ ನಿಂದ ಪ್ರತ್ಯೇಕಗೊಂಡಿರುವ ಆರ್ಬಿಟರ್ ಇನ್ನೂ ಒಂದು ವರ್ಷ ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣ ಹಾಕುತ್ತಾ ಅಪರೂಪದ ಫೋಟೋಗಳನ್ನು ಭೂಮಿಗೆ ರವಾನಿಸಲಿದೆ.