ಚಂದ್ರಯಾನ-2; ಜುಲೈ ತಿಂಗಳಲ್ಲಿ ಚಂದ್ರನ ಅಂಗಳಕ್ಕೆ ಹಾರಲಿದೆ ಮತ್ತೊಂದು ಉಪಗ್ರಹ..!

ಹೊಸದಿಲ್ಲಿ: ಸ್ವದೇಶಿ ನಿರ್ಮಿತ ಚಂದ್ರಯಾನ-1 ಯೋಜನೆ ಯಶಸ್ವಿಯಾದ ಬೆನ್ನಿಗೆ ಭಾರತೀಯ  ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 10 ವರ್ಷಗಳ ನಂತರ ಇದೇ ಜುಲೈ ತಿಂಗಳಲ್ಲಿ ಚಂದ್ರನ ಅಂಗಳಕ್ಕೆ ಮತ್ತೊಂದು ಉಪಗ್ರಹ ಉಡಾವಣೆಗೆ ಯೋಜನೆ ರೂಪಿಸಿದೆ.

ಬುಧವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೋ, “ಚಂದ್ರನ ಮೇಲ್ಮೈಯಲ್ಲಿನ ದಕ್ಷಿಣ ಭಾಗದಲ್ಲಿರುವ ಖನಿಜ ನಿಕ್ಷೇಪಗಳ ಕುರಿತು ಮತ್ತಷ್ಟು ಸಂಶೋಧನೆ ನಡೆಸುವ ಉದ್ದೇಶದಿಂದ ಚಂದ್ರಯಾನ-2 ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಯೋಜನೆ ಸಂಬಂಧ ಕಳೆದ ಮೂರು ವರ್ಷದಿಂದ ಇಸ್ರೋ ಕೆಲಸ ನಿರ್ವಹಿಸುತ್ತಿದೆ. ಜುಲೈ 9 ರಿಂದ 16 ರ ಅವಧಿಯಲ್ಲಿ ಉಪಗ್ರಹವನ್ನು ಉಡಾಯಿಸುವ ಸಾಧ್ಯತೆ ಇದೆ” ಎಂದು ಮಾಹಿತಿ ನೀಡಿದೆ.

ಚಂದ್ರಯಾನ-2 ಯೋಜನೆಗಾಗಿ ಇಸ್ರೋ GSLV Mk III (ಜಿಎಸ್​ಎಲ್​ವಿ ಎಂಕೆ 3) ಎಂಬ ಹೊಸ ಮಾದರಿಯ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ರಾಕೆಟ್ ಒಂದನ್ನು ನಿರ್ಮಿಸಿದೆ. ಇದರ ಮೂಲಕ ಉಪಗ್ರಹವನ್ನು ಭೂ ಕಕ್ಷೆಯಿಂದ ಚಂದ್ರನ ಮೇಲ್ಮೈಗೆ ಉಡಾಯಿಸಲಾಗುವುದು. ಉಡಾವಣೆಯ ನಂತರ ಪೂರ್ವನಿರ್ಧಾರಿತದಂತೆ ಉಪಗ್ರಹ ಚಂದ್ರನ ದಕ್ಷಿಣ ಧೃವದಲ್ಲಿ ಇಳಿಯಲಿದ್ದು, ನಂತರ ಪ್ರಯೋಗಗಳು ನಡೆಯಲಿವೆ ಎಂದು ಇಸ್ರೋ ತಿಳಿಸಿದೆ.

ಯಶಸ್ವಿಯಾಗಿದ್ದ ಚಂದ್ರಯಾನ -1 : ಚಂದ್ರನಲ್ಲಿರುವ ಘನೀಕೃತ ನೀರಿನ ಉಪಸ್ಥಿತಿಯನ್ನು ಪತ್ತೆಹಚ್ಚಲು ಹಾಗೂ ಇಡೀ ಚಂದ್ರನ ಮೇಲ್ಮೈಯಲ್ಲಿರುವ ರಾಸಾಯನ ಮತ್ತು ಖನಿಜ ನಿಕ್ಷೇಪಗಳ ಮಾಪನ ಮಾಡುವ ಸಲುವಾಗಿ ಚಂದ್ರಯಾನ-1 ಯೋಜನೆಯನ್ನು ಕೈಗೊಳ್ಳಲಾಗಿತ್ತು.

ಅಕ್ಟೋಬರ್ 2008ರಲ್ಲಿ pslv c11 (ಪಿಎಸ್​ಎಲ್​ವಿ ಸಿ11) ಎಂಬ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾದ ಈ ಉಪಗ್ರಹ 2009ರ ತನಕ ಕಾರ್ಯನಿರ್ವಹಿಸಿತ್ತು. ಈ ಅವಧಿಯಲ್ಲಿ ಚಂದ್ರನ ಮೇಲ್ಮೈ ಮೇಲೆ ಸಾಕಷ್ಟು ಸಂಶೋಧನೆ ನಡೆಸಿದ್ದ ಉಪಗ್ರಹ, ಚಂದ್ರನ ಒಡಲಲ್ಲಿರುವ ಮ್ಯಾಗ್ನೀಶಿಯಂ, ಅಲ್ಯುಮೀನಿಯಂ, ಸಿಲಿಕಾನ್, ಕ್ಯಾಲ್ಸಿಯಂ, ಕಬ್ಬಿಣ, ಟೈಟೇನಿಯಂ, ರೆಡಾನ್, ಯುರೇನಿಯಂ ಹಾಗೂ ಥೊರಿಯಂ ನಿಕ್ಷೇಪಗಳ ಕುರಿತು ಮಾಪನ ಮಾಡಿತ್ತು. ಅಲ್ಲದೆ ಚಂದ್ರನ ಧೃವಗಳಲ್ಲಿರುವ ಘನೀಕೃತ ನೀರಿನ ಅಂಶಗಳ ಕುರಿತು ಮಹತ್ವದ ಮಾಹಿತಿಗಳನ್ನು ನೀಡಿತ್ತು. ಅಲ್ಲದೆ 3ಡಿ ಗುಣಮಟ್ಟದ ಛಾಯಾಚಿತ್ರಗಳನ್ನು ಭೂಮಿಗೆ ರವಾನಿಸಿ ಯಶಸ್ವಿ ಯೋಜನೆಯಾಗಿ ರೂಪುಗೊಂಡಿತ್ತು.

ಚಂದ್ರಯಾನ-2 ಯೋಜನೆಯನ್ನೂ ಸಹ ಚಂದ್ರನ ಮೇಲ್ಮೈಯಲ್ಲಿರುವ ಶಕ್ತಿಯ ಪ್ರಮುಖ ಮೂಲವಾದ ಹೀಲಿಯಂ ಖನಿದ ಕುರಿತ ಸಂಶೋಧನೆಗಾಗಿ ಕೈಗೊಳ್ಳಲಾಗುತ್ತಿರುವುದು ವಿಶೇಷ.

ಚಂದ್ರಯಾನ-1ರ ಯೋಜನೆಯಲ್ಲಿ ಇಸ್ರೋ ಭಾರತದ ಉಪಗ್ರಹದ ಜೊತೆಗೆ ಇತರೆ ಐದು ದೇಶಗಳ ಉಪಗ್ರಹವನ್ನು ಒಂದೇ ರಾಕೆಟ್​ನಲ್ಲಿ ಹಾರಿಸುವ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿತ್ತು. ಆದರೆ, ಈ ಬಾರಿಯ ಚಂದ್ರಯಾನ-2 ಯೋಜನೆಯಲ್ಲಿ ಭಾರತದ ಉಪಗ್ರಹವನ್ನು ಮಾತ್ರ ಉಡಾಯಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ