ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ; ಹೊಸ ದಾಖಲೆಯತ್ತ ಇಸ್ರೋ

ಶ್ರೀಹರಿಕೋಟ: ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದೆನಿಸಿದ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಚಾಲನೆಯಲ್ಲಿದೆ. ಭಾನುವಾರ 6:43ರಿಂದ 20 ಗಂಟೆಗಳ ಕ್ಷಣಗಣನೆ ಪ್ರಾರಂಭಿಸಿದ್ದಾಗಿ ಇಸ್ರೋ ಸಂಸ್ಥೆ ತಿಳಿಸಿದೆ. ಇವತ್ತು ಮಧ್ಯಾಹ್ನ 2:43ಕ್ಕೆ ಚಂದ್ರಯಾನ್-2 ಗಗನನೌಕೆ ಹೊತ್ತ ಜಿಎಸ್​ಎಲ್​ವಿ-MkIII-M1 ರಾಕೆಟ್ ನಭಕ್ಕೆ ಹಾರಲಿದೆ. ಇದು ಈ ಉಪಗ್ರಹ ಉಡಾವಣೆಗೆ ಇಸ್ರೋ ನಡೆಸುತ್ತಿರುವ ಎರಡನೇ ಪ್ರಯತ್ನವಾಗಿದೆ.

ಜುಲೈ 15ರ ಮಧ್ಯರಾತ್ರಿಯಂದು ನಡೆದ ಮೊದಲ ಪ್ರಯತ್ನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಸ್ಥಗಿತಗೊಳಿಸಲಾಗಿತ್ತು. ಉಡಾವಣೆಗೆ 56 ನಿಮಿಷ ಇದ್ದಾಗ ರಾಕೆಟ್​ಗೆ ಇಂಧನ ತುಂಬಿಸುವ ವೇಳೆ ಈ ದೋಷ ಪತ್ತೆಯಾಗಿತ್ತು. ವಿಜ್ಞಾನಿಗಳು ಕೂಡಲೇ ಉಡಾವಣೆ ಸ್ಥಗಿತಗೊಳಿಸಲು ನಿರ್ಧರಿಸಿದ್ದರು. ಇಸ್ರೋ ವಿಜ್ಞಾನಿಗಳು ಈಗ ಬಹಳ ಎಚ್ಚರಿಕೆಯಿಂದ ತಾಂತ್ರಿಕ ದೋಷಗಳನ್ನು ನಿವಾರಿಸಿದ್ದಾರೆ. ಹಲವು ಬಾರಿ ಪರೀಕ್ಷೆಗಳನ್ನು ನಡೆಸಿ ಮತ್ತೆ ತಾಂತ್ರಿಕ ದೋಷ ಕಾಣಿಸಿಕೊಳ್ಳದಂತೆ ನಿಗಾ ವಹಿಸಿದ್ದಾರೆನ್ನಲಾಗಿದೆ. ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರೂ ಕೂಡ ಎಲ್ಲವೂ ಸನ್ನದ್ಧ ಸ್ಥಿತಿಯಲ್ಲಿರುವುದಾಗಿ ತಿಳಿಸಿದ್ದಾರೆ.

“ಜುಲೈ 15ರಂದು ಕಂಡುಬಂದ ತಾಂತ್ರಿಕ ದೋಷವೆಲ್ಲವನ್ನೂ ಸರಿಪಡಿಸಲಾಗಿದೆ. ರಾಕೆಟ್ ಸುಸ್ಥಿತಿಯಲ್ಲಿದೆ. ಉಡಾವಣಾ ಪೂರ್ವ ಪರೀಕ್ಷೆಗಳು ಯಶಸ್ವಿಯಾಗಿವೆ” ಎಂದು ಕೆ. ಶಿವನ್ ಅವರು ಹೇಳಿದ್ಧಾರೆ.

ಚಂದ್ರಯಾನ-2 ಸುಮಾರು 978 ಕೋಟಿ ವೆಚ್ಚದ ಯೋಜನೆಯಾಗಿದೆ. ಇದನ್ನು ಹೊತ್ತೊಯ್ಯಲು ಸಿದ್ಧವಾಗಿರುವ ಜಿಎಸ್​ಎಲ್​ವಿ ಎಂಕೆ111 ಭಾರತದ ಅತ್ಯಂತ ಶಕ್ತಿಶಾಲಿ ರಾಕೆಟ್ ಎನಿಸಿದೆ. 43.43 ಮೀಟರ್ ಎತ್ತರದ ಈ ರಾಕೆಟನ್ನು ಬಾಹುಬಲಿ ಎಂದೇ ಕರೆಯಲಾಗುತ್ತಿದೆ. ಇನ್ನು ಚಂದ್ರಯಾನ-2 ಉಪಗ್ರಹವು 3,850 ಕಿಲೋ ತೂಕವಿದ್ದು, ಇದರಲ್ಲಿ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್​ಗಳನ್ನು ಸೇರಿಸಲಾಗಿದೆ.

ಸೋಮವಾರ ಮಧ್ಯಾಹ್ನ ಸರಿಯಾಗಿ 2:43ಕ್ಕೆ ನಭಕ್ಕೆ ಜಿಗಿಯಲಿರುವ ರಾಕೆಟು ಸುಮಾರು 16 ನಿಮಿಷಗಳಲ್ಲಿ ಗಗನನೌಕೆಯನ್ನು ಭೂಮಿಯಿಂದ 170 ಕಿಮೀ ಎತ್ತರದಲ್ಲಿರುವ ಭೂ ಕಕ್ಷೆಗೆ ಸೇರಿಸುತ್ತದೆ. ಇದು ಪೂರ್ವನಿರ್ಧಾರಿತ ಭೂಕಕ್ಷೆಯಾಗಿದೆ. ಆ ಬಳಿಕ ಕೆಲ ಸಂಕೀರ್ಣ ಪ್ರಯಾಣಗಳ ಮೂಲಕ ಉಪಗ್ರಹವು ಚಂದ್ರನ ಮೇಲೆ ಇಳಿಯಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಇದು ಆಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಜಗತ್ತಿನಲ್ಲಿ ಈಗಾಗಲೇ ಹಲವು ಬಾರಿ ಚಂದ್ರನಲ್ಲಿಗೆ ಉಪಗ್ರಹಗಳನ್ನ ಕಳುಹಿಸಲಾಗಿದೆ. ಆದರೆ, ಇದೂವರೆಗೂ ಚಂದ್ರನ ದಕ್ಷಿಣ ಧ್ರುವಕ್ಕೆ ಯಾರೂ ಹೋಗಿಲ್ಲ. ಭಾರತದ ಚಂದ್ರಯಾನ-2 ಇದೇ ಜಾಗಕ್ಕೆ ಹೋಗುತ್ತಿರುವುದು ಗಮನಾರ್ಹ. ಇಲ್ಲಿ ಚಂದ್ರನ ಬಗ್ಗೆ ಹೊಸ ಸುಳಿವು ಮತ್ತು ವಿಚಾರಗಳು ಸಿಕ್ಕಬಹುದೆಂದು ನಂಬಲಾಗಿದೆ. ಹಾಗೆಯೇ, ಚಂದ್ರನಲ್ಲಿ ಲ್ಯಾಂಡರ್ ಇಳಿಸಿರುವುದು ಇದೂವರೆಗೂ ಬರೇ ಮೂರು ದೇಶಗಳು ಮಾತ್ರ. ಹೀಗಾಗಿ, ಭಾರತಕ್ಕೆ ಇದು ಪ್ರತಿಷ್ಠೆಯ ವಿಷಯವೂ ಹೌದು.

ಹನ್ನೊಂದು ವರ್ಷಗಳ ಹಿಂದೆ, ಭಾರತ ಚಂದ್ರಯಾನ-1 ಉಪಗ್ರಹವನ್ನು ಕಳುಹಿಸಿತ್ತು. ಆದರೆ, ಅದು ಚಂದ್ರನ ನೆಲದ ಮೇಲೆ ಇಳಿಯದೆ ಮೇಲ್ಮೈನಲ್ಲಿ ಸುತ್ತಾಡಿತ್ತು. 312 ದಿನಗಳ ಕಾಲ ಚಾಲನೆಯಲ್ಲಿದ್ದ ಆ ಉಪಗ್ರಹ ಚಂದ್ರನ ಸುತ್ತ ದಾಖಲೆಯ 3,400 ಕ್ಕಿಂತ ಹೆಚ್ಚು ಬಾರಿ ಪ್ರದಕ್ಷಿಣೆ ಹಾಕಿತ್ತು. ಚಂದ್ರನಲ್ಲಿ ನೀರಿತ್ತೆಂಬ ಸ್ಪಷ್ಟ ಸಾಕ್ಷ್ಯವನ್ನು ವಿಶ್ವಕ್ಕೇ ಮೊದಲು ನೀಡಿದ ಹೆಗ್ಗಳಿಕೆ ಆಗ ಸಂದಾಯವಾಗಿತ್ತು. ಈಗ ಚಂದ್ರಯಾನ-2 ಉಪಗ್ರಹ ಕೂಡ ಇಂಥದ್ದೇನಾದರೂ ಹೊಸ ಸುಳಿವನ್ನು ಪತ್ತೆಹಚ್ಚಬಹುದು ಎಂದು ಭಾರತವಷ್ಟೇ ಅಲ್ಲ, ಜಗತ್ತಿನ ವಿಜ್ಞಾನಿಗಳೆಲ್ಲರೂ ಕಾತರರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ