ಬಿಎಸ್​ವೈ ಪ್ರಮಾಣ ವಚನಕ್ಕೂ ಮುನ್ನವೇ ಶುರುವಾಯಿತು ಡಿಸಿಎಂ, ಮಂತ್ರಿ ಸ್ಥಾನಗಳಿಗೆ ಪೈಪೋಟಿ

ಬೆಂಗಳೂರು: ಏಳನೇ ಪ್ರಯತ್ನದಲ್ಲಿ ತಮ್ಮ ಆಪರೇಷನ್​ ಕಮಲದಲ್ಲಿ ಯಶಸ್ವಿಯಾದ ಬಿಜೆಪಿ ನಾಯಕರು ಸರ್ಕಾರ ನಡೆಸಲು ಸಜ್ಜಾಗಿದ್ದಾರೆ. ಶುಕ್ರವಾರ ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಬಿಎಸ್​ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಾದ ಒಂದು ವಾರದೊಳಗೆ ಸಂಪುಟ ರಚನೆಯಾಗಲಿದ್ದು, ಪಕ್ಷದಲ್ಲಿ ಈಗಲೇ ಸಚಿವ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.

ಅತೃಪ್ತ ಶಾಸಕರ ಪರೋಕ್ಷ ಬೆಂಬಲದಿಂದ ಬಿಜೆಪಿಯು ಕುಮಾರಸ್ವಾಮಿ ಅವರ ವಿಶ್ವಾಸವನ್ನು ಸೋಲಿಸಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ತಂಡದ ಹಲವರು  ಸಚಿವ ಸ್ಥಾನ ಅಲಂಕರಿಸಲಿದ್ದಾರೆ. ಆದರೆ, ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್​ ತೀರ್ಪು ಏನಾಗಲಿದೆ ಎಂಬ ಕುತೂಹಲ ಮೂಡಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆ ಅವರು ಮತ್ತೆ ಚುನಾವಣೆಯಲ್ಲಿ ಗೆದ್ದು ಬಂದ ನಂತರವೇ ಅವರು ಈ ಸ್ಥಾನ ಅಲಂಕರಿಸಬೇಕಾಗಿದೆ.

ಬಿಜೆಪಿ ಪಾಳೆಯದಲ್ಲಿ ಈಗಾಗಲೇ ಜಾತಿ ಸಮೀಕರಣ ಹಾಗೂ ಹಿರಿತನದ ಮೇಲೆ ಸಚಿವ ಸ್ಥಾನ ನೀಡಲಾಗುವುದು ಎಂಬ ಮಾತು ಕೇಳಿ ಬಂದಿದೆ. ಇನ್ನು ಡಿಸಿಎಂ ಹುದ್ದೆ ಮೇಲೆ ಈಗಾಗಲೇ ಅನೇಕ ನಾಯಕರು ಕಣ್ಣಿಟ್ಟಿದ್ದು, ಇದಕ್ಕಾಗಿ ಭಾರೀ ಪೈಪೋಟಿ ಶುರುವಾಗಿದೆ.

ಶ್ರೀರಾಮುಲು, ಈಶ್ವರಪ್ಪ, ಅರವಿಂದ್​ ಲಿಂಬಾವಳಿ, ಆರ್.​ ಅಶೋಕ್​ ಸೇರಿದಂತೆ ಅನೇಕ ನಾಯಕರು ಈಗಾಗಲೇ ಡಿಸಿಎಂ ಸ್ಥಾನಕ್ಕೆ ಪೈಪೋಟಿ ಆರಂಭಿಸಿದ್ದಾರೆ. ಈ ನಡುವೆ ರಮೇಶ್​ ಜಾರಕಿಹೊಳಿ ಕೂಡ ಡಿಸಿಎಂ ಸ್ಥಾನದ ಆಕಾಂಕ್ಷೆ ಮೇರೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಯಾರಿಗೆ ಈ ಸ್ಥಾನ ಲಭಿಸಲಿದೆ ಕಾದು ನೋಡಬೇಕಿದೆ.

ಮೊಳಕಾಲ್ಮೂರು ಶಾಸಕರ ಶ್ರೀರಾಮಲು ಅವರನ್ನು ಡಿಸಿಎಂ ಮಾಡಬೇಕು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಈ ಬಾರಿ ಈ ಪದವಿ ಸಿಗಬೇಕು ಶ್ರೀರಾಮುಲು ಕಾಂಗ್ರೆಸ್​ ನಾಯಕರ ವಿರುದ್ಧ ನಿಂತು ಗೆದ್ದವರು. ಪಕ್ಷದ ಪರವಾಗಿ ಸಾಕಷ್ಟು ದುಡಿದಿದ್ದಾರೆ. ಈ ಹಿನ್ನೆಲೆ ಅವರಿಗೆ ಡಿಸಿಎಂ ಸ್ಥಾನ ಸಿಗಲೇಬೇಕು. ಒಂದು ವೇಳೆ ಸಿಗದಿದ್ದರೆ ಹೋರಾಟ ಮಾಡುವುದಾಗಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಮೈತ್ರಿ ಸರ್ಕಾರ ಪತನವಾಗುವ ಮುನ್ನವೇ ಸಚಿವ ಸ್ಥಾನಕ್ಕೆ ಪೈಪೋಟಿ ಶುರುವಾಗಿತ್ತು. ಈಗಾಗಲೇ  ಮೂರು-ನಾಲ್ಕು ಬಾರಿ ಸತತ ಗೆಲುವು ಸಾಧಿಸಿರುವ ಶಾಸಕರು ಈಬಾರಿ ತಮಗೆ ಸಚಿವ ಸ್ಥಾನ ಸಿಗಲಿದೆ ಎಂಬ ಭರವಸೆಯಲ್ಲಿದ್ದಾರೆ. ಇನ್ನು ಈ ಕುರಿತು ಎರಡು ದಿನಗಳ ಹಿಂದೆ ಮಾತನಾಡಿದ್ದ ಜಿ ತಿಪ್ಪಾರೆಡ್ಡಿ, ಈಗಾಗಲೇ ಆರು ಬಾರಿ ಗೆದ್ದಿರುವ ನಾನು ಸಚಿವಸ್ಥಾನದ ಆಕಾಂಕ್ಷಿಯಾಗಿದ್ದು, ಹಿರಿತನದ ಆಧಾರದ ಮೇಲೆ ತಮಗೆ ಸ್ಥಾನ ಲಭಿಸುವ ಅವಕಾಶವಿದೆ ಎಂದು ತಮ್ಮ ಮನದ ಹಿಂಗಿತವನ್ನು ಬಹಿರಂಗ ಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ