ಮುಂದಿನ ತಿಂಗಳೊಳಗೆ ವಾಣಿವಿಲಾಸ ಸಾಗರಕ್ಕೆ ನೀರು ಬಿಡದಿದ್ದರೆ ರಾಜೀನಾಮೆ ನೀಡುವೆ; ಸಚಿವ ವೆಂಕಟರಮಣಪ್ಪ

ಚಿತ್ರದುರ್ಗ: ಆ. 10ರೊಳಗೆ ವಾಣಿವಿಲಾಸ ಸಾಗರಕ್ಕೆ ನೀರು ಬಿಡದೇ ಇದ್ದರೆ ರಾಜೀನಾಮೆ ನೀಡುವುದಾಗಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ಮೈತ್ರಿ ಸರ್ಕಾರದ ಮೇಲೆ ಹೊಸ ಬಾಂಬ್ ಹಾಕಿದ್ದಾರೆ.

ಮುಂದಿನ ತಿಂಗಳು 10ರೊಳಗೆ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಬೇಕು. ನಾನು ಕೂಡ ರೈತನ ಮಗ. ರೈತರಿಗೆ ಕೊಟ್ಟ ಮಾತು ತಪ್ಪುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಮುಗಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಚಿತ್ರದುರ್ಗ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಹೇಳಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಮುಗಿಸಲು ಆಗ್ರಹಿಸಿ ಹಿರಿಯೂರು ವಕೀಲರ ಸಂಘ ನಿನ್ನೆ ಉಪವಾಸ ಸತ್ಯಾಗ್ರಹ ನಡೆಸಿದೆ. ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದಾಗ ಹೇಳಿಕೆ ನೀಡಿರುವ ಸಚಿವ ವೆಂಕಟರಮಣಪ್ಪ, ಜುಲೈ 30ರ ವೇಳೆಗೆ ಮಳೆ ಆಗುತ್ತದೆ. ನಂತರ ವಾಣಿ ವಿಲಾಸ ಸಾಗರಕ್ಕೆ ನೀರು ಬರುತ್ತದೆ. ಆ. 10ರೊಳಗೆ ನೀರು ಹರಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಈ ಹಿಂದೆ ಕೂಡ ಮೈತ್ರಿ ಸರ್ಕಾರದ ಮೇಲೆ ಅಸಮಾಧಾನ ಹೊರಹಾಕಿದ್ದ ಕಾಂಗ್ರೆಸ್ ಸಚಿವ ವೆಂಕಟರಮಣಪ್ಪ, ಕಾರ್ಮಿಕ ಖಾತೆಯನ್ನು ಇಟ್ಟುಕೊಂಡು ನಾನೇನು ಮಾಡಲಿ? ನನಗೆ ಪ್ರಭಾವಿ ಖಾತೆ ನೀಡದಿದ್ದರೆ ರಾಜೀನಾಮೆ ಕೊಡುತ್ತೇನೆ. ಅಧಿಕಾರಿಗಳ ಕಿರಿಕಿರಿ ಜತೆಗೆ ಖಾತೆ ಇಟ್ಟುಕೊಂಡು ನಾನೇನು ಮಾಡಲಿ? ಕಾರ್ಮಿಕ ಖಾತೆಯಲ್ಲಿ ಕೆಲಸ ಇಲ್ಲ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನನಗೆ ಬೇರೆ ಯಾವುದಾದರೂ ಪ್ರಭಾವಿ ಖಾತೆ ಕೊಡುವುದಾದರೆ ಕೊಡಲಿ. ಇಲ್ಲದಿದ್ದರೆ ನನ್ನ ದಾರಿ ನನಗೆ ಎಂದು ಹೇಳಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ