ಯಾವುದೇ ಕಾರಣಕ್ಕೂ ಪಕ್ಷದ ರಾಷ್ಟ್ರಾಧ್ಯಕ್ಷನಾಗಿ ಮುಂದುವರೆಯಲ್ಲ; ‘ನನ್ನ ನಿರ್ಧಾರಕ್ಕೆ ನಾನು ಬದ್ಧ’ ರಾಹುಲ್ ಸ್ಪಷ್ಟನೆ!

ನವದೆಹಲಿ; “ಪಕ್ಷದ ರಾಷ್ಟ್ರಾಧ್ಯಕ್ಷ ಹುದ್ದೆಗೆ ನಾನು ಬಹಳ ಯೋಚಿಸಿ ರಾಜೀನಾಮೆ ನೀಡಿದ್ದೇನೆ. ಈ ನನ್ನ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ಯಾವುದೇ ಕಾರಣಕ್ಕೂ ಮತ್ತೆ ಈ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಯೇ ಇಲ್ಲ” ಎಂದು ಬುಧವಾರ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ.

ಲೋಕಸಭೆ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ಬುಧವಾರ ಯುಪಿಎ ಮುಖ್ಯಸ್ಥೆ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ಸಂಸದರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಬಹುಪಾಲು ಕಾಂಗ್ರೆಸ್ ಸಂಸದರು ಪಕ್ಷದ ರಾಷ್ಟ್ರಾಧ್ಯಕ್ಷ ಹುದ್ದೆಯಲ್ಲಿ ರಾಹುಲ್ ಗಾಂಧಿಯವರೇ ಮುಂದುವರೆಯಬೇಕು ಎಂದು ತಮ್ಮ ಅಭಿಪ್ರಾಯವನ್ನು ಮುಂದಿಟ್ಟರು. ಆದರೆ, ಇದನ್ನು ಸಾರಾಸಗಟಾಗಿ ತಳ್ಳಿಹಾಕಿರುವ ರಾಹುಲ್ ತಾವು ಯಾವುದೇ ಕಾರಣಕ್ಕೂ ಈ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಪಕ್ಷದ ಹಿರಿಯ ಸಂಸದರಾದ ಶಶಿ ತರೂರ್ ಹಾಗೂ ಮನೀಶ್ ತಿವಾರಿ ಸಭೆಯಲ್ಲಿ ರಾಹುಲ್ ಗಾಂಧಿ ಅವರ ಮನವೋಲಿಸಲು ಮುಂದಾಗಿದ್ದಾರೆ. “ಪಕ್ಷದ ಸೋಲಿಗೆ ಕೇವಲ ಒಬ್ಬ ವ್ಯಕ್ತಿ ಕಾರಣವಲ್ಲ ಹಾಗೂ ಓರ್ವ ವ್ಯಕ್ತಿಯೇ ಸೋಲಿನ ಎಲ್ಲಾ ಹೊಣೆ ಹೊರುವುದು ಸರಿಯಲ್ಲ ಹೀಗಾಗಿ ರಾಹುಲ್ ಗಾಂಧಿ ರಾಷ್ಟ್ರಾಧ್ಯಕ್ಷ ಹುದ್ದೆಯಲ್ಲೇ ಮುಂದುವರೆಯಬೇಕು” ಎಂದು ಒತ್ತಾಯಿಸಿದ್ದಾರೆ. ಆದರೆ, ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರ ಎದುರು ತಾವು ತಮ್ಮ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಹುಲ್ ರಾಜೀನಾಮೆ ಕುರಿತು ಭಾನುವಾರವೇ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್, “ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಹುಲ್ ಅವರ ವ್ಯಯಕ್ತಿಕ ವಿಚಾರ, ಅದನ್ನು ಎಲ್ಲರೂ ಗೌರವಿಸಬೇಕು. ಅವರು ತಮ್ಮ ಹುದ್ದೆಯಲ್ಲಿ ಮುಂದುವರೆಯಲು ನಿರಾಕರಿಸಿದರೆ, ಮತ್ತೊಬ್ಬ ಉತ್ತಮ ನಾಯಕನಿಗೆ ಆ ಸ್ಥಾನ ನೀಡಿ. ನೆಹರು-ಗಾಂಧಿ ಕುಟುಂಬದ ಹೆಸರನ್ನು ಬಳಸಿಕೊಳ್ಳದೆಯೂ ಕಾಂಗ್ರೆಸ್ ಸದೃಢವಾಗಿ ಬೆಳೆಯಬಲ್ಲದು” ಎಂದು ಅಭಿಪ್ರಾಯಪಟ್ಟಿದ್ದರು.

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸೋಲಿನ ಪರಾಮರ್ಶೆಗಾಗಿ ಮೇ.25ರಂದು ಕರೆದಿದ್ದ ಪಕ್ಷದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲೇ ರಾಹುಲ್ ಗಾಂಧಿ ಸೋಲಿನ ಹೊಣೆ ಹೊತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ, ಸಭೆ ಈ ರಾಜೀನಾಮೆಯನ್ನು ಅಂಗೀಕರಿಸಿರಲಿಲ್ಲ.

ನಂತರ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅನುಪಸ್ಥಿತಿಯಲ್ಲಿ ದೆಹಲಿಯಲ್ಲಿ ಸಭೆ ನಡೆಸಿದ್ದ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಹಮದ್ ಪಟೇಲ್, ಗುಲಾಂ ನಭಿ ಆಜಾದ್, ಪಿ. ಚಿದಂಬರಮ್, ಕೆ.ಸಿ. ವೇಣುಗೋಪಾಲ್, ಸುರ್ಜೇವಾಲ, ಜೈರಾಮ್ ರಮೇಶ್ ಹಾಗೂ ಆನಂದ್ ಶರ್ಮಾ ರಾಹುಲ್ ಗಾಂಧಿಯ ಮನವೊಲಿಸಿ ಅವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮುಂದುವರೆಯುವಂತೆ ಕೋರುವ ನಿರ್ಧಾರ ತಳೆದಿದ್ದರು. ಆದರೆ, ಇದನ್ನು ಸಾರಾಸಗಟಾಗಿ ನಿರಾಕರಿಸಿದ್ದ ರಾಹುಲ್ ಹಿಂದುಳಿದ ಸಮಾಜದ ವ್ಯಕ್ತಿಗೆ ಈ ಹುದ್ದೆ ನೀಡುವಂತೆ ಶಿಫಾರಸು ಮಾಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ