ವಯನಾಡು, ಜೂ.8- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ವಾಗ್ದಾಳಿ ಮುಂದುವರಿಸಿದ್ದಾರೆ.
ಮೋದಿ ಅವರ ಚುನಾವಣಾ ಭಾಷಣಗಳು ಸುಳ್ಳು ಮತ್ತು ದ್ವೇಷದಿಂದ ಭರ್ತಿಯಾಗಿದ್ದವು. ಅವರು ಮಿಥ್ಯ, ಅಸಹನೆ, ಕೆಟ್ಟ ಭಾವನಾತ್ಮಕ ಅಭಿಪ್ರಾಯಗಳ ಪ್ರತಿನಿಧಿ ಎಂದು ರಾಹುಲ್ ಟೀಕಿಸಿದ್ದಾರೆ.
ತಾವು ಜಯ ಸಾಧಿಸಿದ್ದ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ ರಾಹುಲ್, ಭರ್ಜರಿ ರೋಡ್ಶೋ ನಡೆಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ನಂತರ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನಾನು ಮೋದಿ ಮತ್ತು ಅವರ ನೇತೃತ್ವದ ಸರ್ಕಾರದ ನಕಾರಾತ್ಮಕ ಧೋರಣೆ ವಿರುದ್ಧ ಹೋರಾಟ ಮುಂದುವರಿಸುತ್ತೇನೆ ಎಂದರು.
ಕಾಂಗ್ರೆಸ್ ಸೋಲಿನಿಂದ ಕಾರ್ಯಕರ್ತರು ಧೃತಿಗೆಡಬಾರದು. ಬೇರುಮಟ್ಟದಿಂದ ಪಕ್ಷವನ್ನು ಪುನರ್ ಸಂಘಟಿಸಲು ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದು ರಾಹುಲ್ ಪುನರುಚ್ಚರಿಸಿದರು.
ಇದಕ್ಕೂ ಮುನ್ನ ವಯನಾಡಿನ ಜಿಲ್ಲಾ ಕಲೆಕ್ಟರ್ರವರ ಕಚೇರಿಯಲ್ಲಿರುವ ಸಂಸದರ ಸಮಾಲೋಚನಾ ಕೇಂದ್ರದಲ್ಲಿ ಸಾರ್ವಜನಿಕರಿಂದ ದೂರು-ದುಮ್ಮಾನಗಳ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.