ಶುದ್ಧ ಕುಡಿಯುವ ನೀರಿನ ದರ ಹೆಚ್ಚಳ-ಶಾಸಕ ಎಚ್.ಕೆ.ಪಾಟೀಲ್‍ರವರಿಂದ ತೀವ್ರ ವಿರೋಧ

ಬೆಂಗಳೂರು, ಜೂ.8-ಶುದ್ಧ ಕುಡಿಯುವ ನೀರಿನ ದರವನ್ನು ಪ್ರತಿ ಲೀಟರ್‍ಗೆ 10 ಪೈಸೆಯಿಂದ 25ಪೈಸೆಗೆ ಹೆಚ್ಚಿಸಲು ಮುಂದಾಗಿರುವುದನ್ನು ಹಿರಿಯ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ತೀವ್ರವಾಗಿ ವಿರೋಧಿಸಿರುವುದಲ್ಲದೆ, ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದ ನಿಲುವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೆರೇಗೌಡ ಅವರಿಗೆ ನೇರವಾಗಿ ಪತ್ರ ಬರೆದು ತಮ್ಮ ಸಿಟ್ಟಿನ್ನು ಹೊರ ಹಾಕಿರುವ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು, ಕೂಡಲೇ ನೀರಿನ ದರ ಏರಿಕೆಯನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.

ಶುದ್ಧ ಕುಡಿಯುವ ನೀರು ಮಾನವನ ಆರೋಗ್ಯವಂತ ಜೀವನಕ್ಕೆ ಬೇಕಿರುವ ಮೂಲಭೂತ ಅವಶ್ಯಕತೆ. ಅಂತರ್ಜಲ ಕುಸಿತಗೊಂಡು ನೀರು ಕಲುಷಿತಗೊಂಡಿರುವ ಸಂದರ್ಭದಲ್ಲಿ ಜನರ ಆರೋಗ್ಯ ಆಘಾತಕಾರಿ ಸ್ಥಿತಿಗೆ ತಲುಪಿದೆ. ಎಲ್ಲರಿಗೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರ ಎಲ್ಲೆಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿತ್ತು.ಅದರ ನಿರ್ವಹಣೆಗೆ ಹೊಸ ವ್ಯವಸ್ಥೆ ರೂಪಿಸಿರುವುದನ್ನು ಸ್ವಾಗತಿಸುತ್ತೇನೆ.

ಆದರೆ ನಿರ್ವಹಣಾ ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣಕ್ಕಾಗಿ 10 ಪೈಸೆಗೆ ಸಿಗುತ್ತಿದ್ದ ಪ್ರತಿ ಲೀಟರ್ ನೀರಿನ ದರವನ್ನು 25 ಪೈಸೆಗೆ ಹೆಚ್ಚಿಸಲು ಮುಂದಾಗಿರುವುದು ಸಮರ್ಥನೀಯವಲ್ಲ. ಕಾಲಕಾಲಕ್ಕೆ ಶುದ್ಧ ಕುಡಿಯುವ ನೀರಿನ ದರವನ್ನು ಪರಿಷ್ಕರಣೆ ಮಾಡುವ ಸರ್ಕಾರದ ನಿಲುವು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ತದ್ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಬಡವರ ಪಕ್ಷ. ಬಡವರು ಹಸಿವಿನಿಂದ ಬಳಲಬಾರದೆಂದು ಅನ್ನಭಾಗ್ಯ ಯೋಜನೆ ಜಾರಿ ಮಾಡಿ ಉಚಿತ ಅಕ್ಕಿ ನೀಡಲಾಗುತ್ತಿದೆ. ಬಡವರ ಊಟ ಹಾಗೂ ಉಪಹಾರಕ್ಕಾಗಿ ಇಂದಿರಾ ಕ್ಯಾಂಟೀನ್‍ಗಳನ್ನು ತೆರೆಯಲಾಗಿದೆ.

ಶುದ್ಧ ಕುಡಿಯುವ ನೀರು ಕೇವಲ ದಾಹ ತಣಿಸುವುದಿಲ್ಲ. ಜಲಮೂಲಗಳಿಂದ ಬರುವ ರೋಗಗಳನ್ನು ತಡೆದು ಆರೋಗ್ಯ ರಕ್ಷಣೆ ಮಾಡುವ ಜೊತೆಗೆ ಆರ್ಥಿಕ ಚೈತನ್ಯ ತುಂಬಲು ನೆರವಾಗುತ್ತಿದೆ. ಬಡವರ ಹಸಿವು ಇಂಗಿಸಲು ಪುಕ್ಕಟ್ಟೆ ಅಕ್ಕಿ ವಿತರಿಸಿ ರಿಯಾಯಿತಿ ದರದಲ್ಲಿ ಆಹಾರ ನೀಡುತ್ತಿರುವಾಗ ದಾಹ ತೀರಿಸುವ ಶುದ್ಧ ಕುಡಿಯುವ ನೀರಿನ ದರವನ್ನು ಹೆಚ್ಚಿಸಲು ಮುಂದಾಗಿರುವುದು ಕಾಂಗ್ರೆಸ್‍ನ ನಿಲುವಿಗೆ ವ್ಯತಿರಿಕ್ತವಾಗಿದೆ.

ದರ ಹೆಚ್ಚಳವನ್ನು ಕೈಬಿಟ್ಟು ನಿರ್ವಹಣಾ ವೆಚ್ಚದಲ್ಲಿನ ವ್ಯತ್ಯಾಸವನ್ನು ಸರ್ಕಾರವೇ ತುಂಬಿಕೊಟ್ಟು ಪ್ರತಿ ಲೀಟರ್ ನೀರನ್ನು 10 ಪೈಸೆ ದರದಲ್ಲೇ ಪೂರೈಕೆ ಮಾಡಬೇಕು. ಬಡವರ ಜೀವನ ಗುಣಮಟ್ಟ ಸುಧಾರಣೆಗೆ ಗ್ರಾಮೀಣ ಜನರ ಆರೋಗ್ಯ ರಕ್ಷಣೆ ಮಹತ್ವದ ಕೊಡುಗೆ ನೀಡುತ್ತಿರುವ ಶುದ್ಧ ಕುಡಿಯುವ ನೀರಿನ ದರವನ್ನು ಹೆಚ್ಚಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಈ ಮೊದಲು ಜಿಂದಾಲ್ ಕಂಪನಿಗೆ ಭೂಮಿ ಮಾರಾಟದ ವಿಷಯವಾಗಿ ಬಹಿರಂಗವಾಗಿ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸುವ ಮೂಲಕ ಎಚ್.ಕೆ.ಪಾಟೀಲ್ ಕಾಂಗ್ರೆಸ್‍ಗೆ ಮುಜುಗರ ಉಂಟು ಮಾಡಿದ್ದರು. ಈಗ ಶುದ್ಧ ಕುಡಿಯುವ ನೀರಿನ ದರ ಹೆಚ್ಚಳದ ಬಗ್ಗೆ ಮಾತನಾಡುವ ಮೂಲಕ ಕಾಂಗ್ರೆಸ್ ನಿಲುವುಗಳನ್ನು ಸಮ್ಮಿಶ್ರ ಸರ್ಕಾರಕ್ಕೆ ಮತ್ತು ಸರ್ಕಾರದಲ್ಲಿ ಸಚಿವರಾಗಿರುವವರಿಗೆ ನೆನಪಿಸಿದ್ದಾರೆ.

ಟೀಕೆಗೆ ಗುರಿಯಾದ ಸರ್ಕಾರದ ನಿರ್ಧಾರ:
ರಾಜ್ಯದಲ್ಲಿ 18 ಸಾವಿರಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ 16 ಸಾವಿರ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಭಾಗದಲ್ಲಿ ಪಂಚಾಯ್ತಿಗಳು, ನಗರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳು ಇವುಗಳ ನಿರ್ವಹಣೆ ಮಾಡುತ್ತಿದ್ದವು. ಆದರೆ ಸರ್ಕಾರ ನಿರ್ವಹಣೆಗಾಗಿ ಯಾವುದೇ ಪ್ರತ್ಯೇಕ ಅನುದಾನವನ್ನು ನೀಡುತ್ತಿರಲಿಲ್ಲ. ಹೀಗಾಗಿ ನಿರ್ವಹಣೆ ಕಳಪೆಯಾಗಿತ್ತು.

ಅದಕ್ಕಾಗಿ ಹೊಸ ವ್ಯವಸ್ಥೆ ರೂಪಿಸಲಾಗಿದ್ದು, ತಾಲೂಕನ್ನು ಒಟ್ಟಾರೆ ಲೆಕ್ಕ ತೆಗೆದುಕೊಂಡು ಅಲ್ಲಿರುವ ಪ್ರತಿಯೊಂದು ಘಟಕದ ನಿರ್ವಹಣೆಗೂ ಐದು ವರ್ಷಕ್ಕೆ 3 ಸಾವಿರ ರೂ.ಗಳಂತೆ ವೆಚ್ಚ ಭರಿಸಲಾಗುತ್ತಿದೆ. ಮೊದಲ ರಿಪೇರಿಯ ವೆಚ್ಚವನ್ನು ಸರ್ಕಾರವೇ ತುಂಬಿಕೊಡುತ್ತದೆ. 5 ರೂ.ಕಾಯಿನ್ ಬದಲಾಗಿ, ಸ್ಮಾರ್ಟ್ ಕಾರ್ಡ್ ಪರಿಚಯಿಸಲಾಗುತ್ತಿದ್ದು, ಅದಕ್ಕೆ ತಗಲುವ 15 ಸಾವಿರ ರೂ.ವೆಚ್ಚವನ್ನು ಸರ್ಕಾರ ಕೊಟ್ಟು, ನೀರಿನ ಮಾರಾಟದಿಂದ ಬರುವ ಆದಾಯವನ್ನು ನಿರ್ವಹಣೆ ಗುತ್ತಿಗೆ ಪಡೆದ ಕಂಪನಿಗಳೇ ಬಳಸಿಕೊಳ್ಳಬಹುದು ಎಂಬ ನಿಯಮ ರೂಪಿಸಲಾಗಿದೆ.

ಇಷ್ಟು ಸಾಲದೆಂಬಂತೆ ಖಾಸಗಿ ಕಂಪನಿಗಳ ಅನುಕೂಲಕ್ಕಾಗಿ ನೀರಿನ ದರವನ್ನು 10 ಪೈಸೆಯಿಂದ 25 ಪೈಸೆ ಹೆಚ್ಚಳಕ್ಕೂ ನಿರ್ಧಾರ ತೆಗೆದುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ಈಗ ಖಾಸಗಿ ಕಂಪನಿಗಳಿಗೆ ಕೊಡಲು ಮುಂದಾಗಿರುವ ಹಣ ಮತ್ತು ಸೌಲಭ್ಯಗಳನ್ನು ಗ್ರಾಮ ಪಂಚಾಯ್ತಿಗಳಿಗೆ ಕೊಟ್ಟಿದರೆ ನಿರ್ವಹಣೆ ಇನ್ನು ಉತ್ತಮಗೊಳ್ಳುತ್ತಿತ್ತು, ಸ್ಥಳೀಯ ಸಂಸ್ಥೆಗಳು ಸದೃಢಗೊಳ್ಳುತ್ತಿದ್ದವು.ಘಟಕಗಳ ಉತ್ತಮ ಕಾರ್ಯನಿರ್ವಹಣೆ ಉತ್ತರದಾಯಿತ್ವವು ಸರ್ಕಾರದ ಬಳಿ ಇರುತ್ತಿತ್ತು.

ಇವೆಲ್ಲವನ್ನೂ ಬಿಟ್ಟು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡಲು ಸರ್ಕಾರ ಮುಂದಾಗಿದೆ ಎಂಬ ಅನುಮಾನಗಳು ತೀವ್ರವಾಗಿ ಕೇಳಿಬಂದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ