ಛತ್ತೀಸ್‍ಗಢದಲ್ಲಿ ಮುಂದುವರೆದ ನಕ್ಸಲರ ಅಟ್ಟಹಾಸ

ರಾಯ್‍ಪುರ್, ಜೂ.8- ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ ಮುಂದುವರಿದಿದೆ. ಬಿಜಾಪುರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಶಸ್ತ್ರ ಸಜ್ಜಿತ ನಕ್ಸಲರು ಬಸ್ಸೊಂದನ್ನು ಅಡ್ಡಗಟ್ಟಿ ಪ್ರಯಾಣಿಕರನ್ನು ಕೆಳಗಿಳಿಸಿ ಅಗ್ನಿಸ್ಪರ್ಶ ಮಾಡಿದ್ದಾರೆ.

ಈ ಕೃತ್ಯದಲ್ಲಿ ಪ್ರಯಾಣಿಕರು ಮತ್ತು ಚಾಲನಾ ಸಿಬ್ಬಂದಿ ಗಾಯಗೊಳ್ಳದೆ ಇದ್ದರೂ ಬಸ್ ಸಂಪೂರ್ಣ ಸುಟ್ಟು ಬೂದಿಯಾಗಿದೆ.

ಬಿಜಾಪುರದಿಂದ ಜೈ ಭವಾನಿ ಟ್ರಾವೆಲ್ಸ್ ಸಂಸ್ಥೆಯ ಖಾಸಗಿ ಬಸ್ ಬೆದ್ರೆ ಗ್ರಾಮಕ್ಕೆ ತೆರಳುತ್ತಿತ್ತು. ಕುರ್ತು ಹಳ್ಳಿ ಬಳಿ 10ಕ್ಕೂ ಹೆಚ್ಚು ಜನರಿದ್ದ ಶಸ್ತ್ರ ಸಜ್ಜಿತ ಮಾವೋವಾದಿಗಳು ಬಸ್ ಅಡ್ಡಗಟ್ಟಿದರು.

ಬಸ್‍ನಲ್ಲಿದ್ದ ಪ್ರಯಾಣಿಕರನ್ನು ಬೆದರಿಸಿ ಚಾಲಕರು-ನಿರ್ವಾಹಕರು ಸೇರಿದಂತೆ ಎಲ್ಲರನ್ನೂ ಕೆಳಗಿಳಿಸಿದರು. ನಂತರ ಬಸ್‍ಗೆ ಬೆಂಕಿ ಹಚ್ಚಿದರು. ಬಸ್ ಸಂಪೂರ್ಣ ಸುಟ್ಟು ಕರಕಲಾಗುವತನಕ ಅಲ್ಲಿದ್ದ ನಕ್ಸಲರು ಬಳಿಕ ಪರಾರಿಯಾದರು.

ಸುದ್ದಿ ತಿಳಿದ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಕ್ಸಲ್ ನಿಗ್ರಹ ತಂಡವು ಪೊಲೀಸರೊಂದಿಗೆ ಮಾವೋವಾದಿಗಳಿಗಾಗಿ ಶೋಧ ಮುಂದುವರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ