ಹುಬ್ಬಳ್ಳಿ: ರಾಜ್ಯ ಸರ್ಕಾರ ಸಲ್ಲಿಸುವ ಪ್ರಸ್ತಾವನೆಗಳಿಗೆ ಕೇಂದ್ರದ ಅನುಮೋದನೆ ಕೊಡಿಸಿಕೊಡುವ ಜತೆಗೆ ಹೆಚ್ಚಿನ ಅನುದಾನ ತಂದು ಕೊಡಲು ಶ್ರಮಿಸುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ ಅವರು, ಮುಂಬರುವ ಲೋಕಸಭಾ ಕಲಾಪ ಸುಗಮವಾಗಿ ನಡೆಯುವಂತೆ ಮಾಡಲು ಎಲ್ಲ ಪ್ರತಿಪಕ್ಷಗಳ ನಾಯಕರ ಜತೆ ಮಾತುಕತೆ ನಡೆಸಿ, ಸಹಕರಿಸುವಂತೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.
ಇದೇ ವೇಳೆ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದ ಅವರು, ಧಾರವಾಡ ಲೋಕಸಭಾ ಕ್ಷೇತ್ರದ ಜನರಿಗೆ ಅಭಾರಿಯಾಗಿದ್ದೇನೆ. ಅವರ ಆಶೀರ್ವಾದದಿಂದ ನಾನು ಕೇಂದ್ರ ಸಚಿವನಾಗಿದ್ದೇನೆ. ನನಗೆ ನೀಡಿದ ಜವಾಬ್ದಾರಿ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಹುಬ್ಬಳ್ಳಿಗೆ ಫ್ಲೈ ಓವರ್ ನಿರ್ಮಾಣಕ್ಕೆ 315 ಕೋಟಿ ರೂ.ಗಳ ಒಂದು ಪ್ರಸ್ತಾವನೆಗೆ ಗಡ್ಕರಿಯವರ ಸಹಿ ಮಾಡಿಸಿದ್ದೇವೆ. ಇನ್ನೊಂದು ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಬೇಗ ಸಲ್ಲಿಸಲಿ, ಮಂಜೂರು ಮಾಡಿಸಲು ಬದ್ಧ ಎಂದರು.
ಮಹದಾಯಿ ಕುರಿತು ಪ್ರತಿಕ್ರಿಯಿಸಿ, ಕಾನೂನು ತಜ್ಞರ ಜತೆ ಮುಖಂಡರು ಚರ್ಚಿಸಲಿ. ಎಲ್ಲರೂ ಒಂದಾಗಿ ಮಹದಾಯಿ ಸಮಸ್ಯೆ ಬಗೆಹರಿಸೋಣ. ಕೋಯ್ನಾ ನದಿ ಸಮಸ್ಯೆಯನ್ನು ಮಹಾರಾಷ್ಟ್ರ ಸಿಎಂ ಜತೆಗೆ ಚರ್ಚೆ ಮಾಡಿ ಬಗೆಹರಿಸುತ್ತೇನೆ. ಅವರು ಕರ್ನಾಟಕದಿಂದಲೂ ನೀರು ಕೇಳಿದ್ದಾರೆ. ಉಭಯ ರಾಜ್ಯಗಳ ಸಿಎಂಗಳ ಭೇಟಿ ಆಗಬೇಕಿದೆ. ಈ ಕುರಿತು ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಜತೆಗೂ ಮಾತನಾಡಿದ್ದೇನೆ ಎಂದರು.
Hubli,Prahlad joshi